ತುಮಕೂರು


ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಜಲಾಶಯದಲ್ಲಿ ಸ್ವಯಂ ಚಾಲಿತ ವೇರ್‍ವಾಟರ್ ಫ್ಲಡ್‍ಗೇಟ್ ವಿನ್ಯಾಸಕ್ಕೆ ಪೇಟೆಂಟ್ ಪಡೆದ ಮೊದಲ ವ್ಯಕ್ತಿಯಾಗಿದ್ದರು ಎಂದು ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ ಕೊಡ್ಲಿಯವರ ಅವರು ತಿಳಿಸಿದರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಲೋಕೋಪಯೋಗಿ ಇಲಾಖೆ ವಿಭಾಗೀಯ ಕಚೇರಿ ಆವರಣದಲ್ಲಿಂದು ಆಯೋಜಿಸಿದ್ದ “ಇಂಜಿನಿಯರ್ಸ್ ದಿನಾಚರಣೆ” ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, ನಾಡಿನಲ್ಲಿ ಜಲಾಶಯಗಳಿಗೆ ಅಣೆಕಟ್ಟು ನಿರ್ಮಾಣ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಪ್ರವಾಹ ರಕ್ಷಣೆ ವ್ಯವಸ್ಥೆಯೊಂದಿಗೆ ಕೈಗಾರಿಕೆಗಳ ಸ್ಥಾಪನೆಯಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಅವರು ಬಡತನದಲ್ಲಿ ಜನಿಸಿದರೂ ಲಭ್ಯವಿರುವ ಸೌಲಭ್ಯದಲ್ಲಿಯೇ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿ ನಾಡಿಗೆ ಕೀರ್ತಿ ತಂದಿದ್ದರು. ತಾವು ಬದುಕಿದ 101 ವರ್ಷಗಳ ಕಾಲ ಜನಾನುಕೂಲಕ್ಕಾಗಿಯೇ ವಿನೂತನ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದರು. ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿ 1861ರ ಸೆಪ್ಟೆಂಬರ್ 15ರಂದು ಜನಿಸಿದ ಇವರು ಇಂಜಿನಿಯರ್ ಪದವಿ ಗಳಿಸಿ ಮುಂಬೈ ನಗರದ ಲೋಕೋಪಯೋಗಿ ಇಲಾಖೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಉತ್ತಮ ಗುಣ ನಿಯಂತ್ರಕರಾಗಿ, ವಿನ್ಯಾಸಗಾರರಾಗಿ, ದಿವಾನರಾಗಿ, ಆಡಳಿತಗಾರರಾಗಿ, ಲೇಖಕರಾಗಿ, ಆರ್ಥಿಕ ತಜ್ಞರಾಗಿ ಜನಮಾನಸದಲ್ಲಿ ಉಳಿಯುವಂತೆ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಮುಂಬೈನ ವೃತ್ತಿ ಜೀವನದ ನಂತರ ಮೈಸೂರು ಸಂಸ್ಥಾನದ ಮಹಾರಾಜರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಮಂತ್ರಣದ ಮೇರೆಗೆ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಇಂಜಿನಿಯರ್, ದಿವಾನರಾಗಿ ವಿಶ್ವೇಶ್ವರಯ್ಯ ಅವರು ಸೇವೆ ಆರಂಭಿಸಿದರು. ತಮ್ಮ ಸೇವೆಯಲ್ಲಿ
ಕೈಗಾರಿಕೀಕರಣದ ಪಿತಾಮಹ, ನೀರಾವರಿ ಕ್ಷೇತ್ರದ ಅಪ್ರತಿಮ ಸಾಧಕ, ಉತ್ತಮ ಸಾಮಾಜಿಕ ಚಿಂತಕರೆನಿಸಿಕೊಂಡಿದ್ದರು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎನ್.ಶಿವಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಇಂಜಿನಿಯರ್‍ಗಳು ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕತೆ, ಇಚ್ಛಾಶಕ್ತಿ,
ಆದರ್ಶ, ದೂರದರ್ಶಿತ್ವವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರಲ್ಲದೆ, ಇಂಜಿನಿಯರ್‍ಗಳು ಎಷ್ಟೇ ಕಾರ್ಯದ ಒತ್ತಡವಿದ್ದರೂ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜೊತೆಗೆ ನಿರ್ವಹಣೆಯನ್ನೂ ಸಹ ಮಾಡಬೇಕೆಂದು ಸಲಹೆ ನೀಡಿದರು.
ಮಧುಗಿರಿ ತಾಲ್ಲೂಕು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹೆಚ್.ಎಸ್. ನಿರಂಜನಮೂರ್ತಿ ಮಾತನಾಡುತ್ತಾ, ವಿಶ್ವೇಶ್ವರಯ್ಯ ಅವರು ರೂಪಿಸಿರುವ ಯೋಜನೆಗಳು ಶಾಶ್ವತ ಎನಿಸಿಕೊಂಡಿವೆ. ಅವರ ದೂರದರ್ಶಿತ್ವ ನೀರಾವರಿ ಯೋಜನೆಗಳಿಂದ ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರಲ್ಲದೆ, ಮೈಸೂರು ಸಂಸ್ಥಾನವನ್ನು ಮಾದರಿಯನ್ನಾಗಿ ಮಾಡಿದ ಕೀರ್ತಿ ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಡಿ. ರಾಜಶೇಖರ್ ಮಾತನಾಡುತ್ತಾ, ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳ ಇಂಜಿನಿಯರ್‍ಗಳು ಸೇರಿ ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲಿ ಇಂಜಿನಿಯರ್‍ಗಳ ದಿನಾಚರಣೆಯನ್ನು ಆಚರಿಸಬೇಕು ಎಂದು ಸಲಹೆ ನೀಡಿದರು.
ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಎನ್.ವಿ. ರಾಮಮೂರ್ತಿ ಮಾತನಾಡಿ, ವಿಶ್ವೇಶ್ವರಯ್ಯ ಅವರು ಮೈಸೂರು ರಾಜ್ಯದ ಶಕ್ತಿಯಾಗಿದ್ದರು. ತಮ್ಮ ದೈತ್ಯ ಪ್ರತಿಭೆಯಿಂದ ವಿಶ್ವದ ಗಮನ ಸೆಳೆದಿದ್ದರು. ವಿಶ್ವೇಶ್ವರಯ್ಯ ಅವರ ಧ್ಯೇಯೋದ್ದೇಶಗಳಲ್ಲಿ ಒಂದನ್ನಾದರೂ ನಾವು ಅಳವಡಿಸಿಕೊಂಡಲ್ಲಿ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.
ಜಿಲ್ಲಾ ಗುತ್ತಿಗೆದಾರರ ಸಂಘದ ಎ.ಡಿ. ಬಲರಾಮಯ್ಯ ಮಾತನಾಡಿ, ವಿಶ್ವೇಶ್ವರಯ್ಯ ಅವರು ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರಲ್ಲದೆ, ಸಹಕಾರ, ನೀರಾವರಿ, ಕೈಗಾರಿಕೆ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿದ್ದರು. ನಾಡಿನ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದರು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ವಿಭಾಗೀಯ
ಕಚೇರಿಯ ಕಾರ್ಯಪಾಲಕ ಅಭಿಯಂತರರಾದ ಡಾ. ಆರ್. ಹೇಮಲತಾ ಮಾತನಾಡಿ, ಎಲ್ಲರ ಬೇಡಿಕೆಯಂತೆ 2023ರ ಜನವರಿ 1ರಂದು ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆ ಅನಾವರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಸೌಜನ್ಯ ಪ್ರಾರ್ಥಿಸಿದರು. ಲೋಕೋಪಯೋಗಿ ಇಲಾಖೆ ಗುಣಭರವಸೆ ವಿಭಾಗದ ಎಇಇ ಜಿ.ಆರ್.ಸುರೇಶ್ ಸ್ವಾಗತಿಸಿದರು. ಪಾಲಿಕೆ ಇಂಜಿನಿಯರ್ ವನಿತಾ ಅವರು ‘ಸರ್ ಎಂ.ವಿ. ನೆನಪು’ ಕುರಿತು ಕವನ ವಾಚನ ಮಾಡಿದರು. ಸಹಾಯಕ ಇಂಜಿನಿಯರ್ ರಾಧಾಕೃಷ್ಣ ನಿರೂಪಿಸಿದರು.
ಇದಕ್ಕೂ ಮುನ್ನ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಸಿ.ಎಸ್. ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳಾದ ಎಂ. ಚಿದಾನಂದ್, ಮಲ್ಲೇಶ್, ಪ್ರಭಾಕರ್, ಕೆ.ಜಿ. ರವಿಚಂದ್ರ ಕುಮಾರ್, ಬಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಲೋಕೋಪಯೋಗಿ ಇಲಾಖೆ ಮಧುಗಿರಿ ಉಪವಿಭಾಗದ ಜಿ.ಸುರೇಶ್, ತಾಂತ್ರಿಕ ಸಹಾಯಕ ಸಿ.ಎಸ್. ಮಲ್ಲಿಕಾರ್ಜುನ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳಾದ ಎಸ್.ಆರ್. ಹರೀಶ್, ಸಿ. ವಿಜಯ ಕುಮಾರ್, ವಿ.ಪ್ರಭಾಕರ್, ಗುರುಸಿದ್ದಪ್ಪ, ಎಚ್.ಎನ್.ಹೊನ್ನೇಶಪ್ಪ, ಜಿ.ಆರ್.ಸುರೇಶ್, ಸಿದ್ದಪ್ಪ, ರೇಣುಕಾಪ್ರಸಾದ್, ಹರೀಶ್, ಕೊಟ್ರೇಶ್, ರಾಮಕೃಷ್ಣ ಉಪಸ್ಥಿತರಿದ್ದರು.

(Visited 1 times, 1 visits today)