ತುಮಕೂರು


ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜನಪರ ಹಾಗೂ ಪಾರದರ್ಶಕತೆಯಿಂದ ಕೂಡಿದ್ದು, ಗ್ರಾಮದ ಸಮಸ್ಯೆಗಳ ಬಗ್ಗೆ ನೇರವಾಗಿ, ಮುಕ್ತವಾಗಿ ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹೋಬಳಿ ಮಣಕಿಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಡಿ ಗ್ರಾಮದಲ್ಲಿ ಬಗೆಹರಿಯದ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವುದರ ಮೂಲಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಗ್ರಾಮಿಣ ಭಾಗದ ಯುವ ಜನತೆ ಸ್ಥಳೀಯ ಸಂಪನ್ಮೂಲ ಹಾಗೂ ಸರ್ಕಾರದ ವಿವಿಧ ಯೋಜನೆಗಳ ನೆರವಿನಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವತ್ತ ಮುಂದಾಗಬೇಕು. ರೈತಾಪಿ ವರ್ಗದವರು ಕೃಷಿ, ಹೈನುಗಾರಿಕೆಗಾಗಿ ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಎಂದು ತಿಳಿಸಿದರು.
ಈ ಹಿಂದೆ ತಿಪಟೂರು ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಮಾಡಿದ ಕೆಲಸಗಳು ಸದಾ ನೆನಪಲ್ಲಿ ಉಳಿಯುವಂತಹವು ಎಂದ ಅವರು, ಜಿಲ್ಲಾಧಿಕಾರಿಯಾಗಿ ಕಂದಾಯ ಇಲಾಖೆಯಲ್ಲಿ ಪಹಣಿ ತಿದ್ದುಪಡಿ, ಪೈಕಿ ಪಹಣಿ ಪ್ರಕರಣಗಳನ್ನು ಗಣನೀಯ ಪ್ರಮಾಣದಲ್ಲಿ ವಿಲೇವಾರಿ ಮಾಡಲಾಗಿದೆ ಎಂದರಲ್ಲದೇ, ಜಿಲ್ಲೆಯ 330 ಗ್ರಾಮಪಂಚಾಯತಿಗಳ ಪೈಕಿ 315 ಪಂಚಾಯಿತಿಗಳಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ನಿವೇಶನಗಳನ್ನು ನೀಡಲಾಗಿದೆ ಎಂದರು.
ನಂತರ ಜಿಲ್ಲಾಡಳಿತದಿಂದ ಸ್ಥಾಪಿಸಿದ್ದ ವಿವಿಧ ಇಲಾಖೆಗಳ ಯೋಜನೆ/ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ಸ್ಥಾಪಿಸಲಾಗಿದ್ದ ಮಳಿಗೆಗಳನ್ನು ಉದ್ಘಾಟಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಸಿಕೊಡಲಾಯಿತು. ಕಂದಾಯ ಇಲಾಖೆಯಿಂದ ವಿವಿಧ ಮಾಶಾಸನಗಳ ಆದೇಶ ಪ್ರತಿ,. ತೋಟಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕ ಸ್ಪ್ರಿಂಕ್ಲರ್, ಶಿಶು ಅಭಿವೃದ್ಧಿ ಯೋಜನೆಯಡಿ ಸುಕನ್ಯ ಸಮೃದ್ದಿ ಯೋಜನೆಯ ಫಲಾನುಭವಿಗಳಿಗೆ ಪಾಸ್‍ಬುಕ್, ತೋಟಗಾರಿಕೆ ಇಲಾಖೆಯ ಎನ್‍ಹೆಚ್‍ಎಂ ಯೋಜನೆಯ ಫಲಾನುಭವಿಗಳಿಗೆ ಮಿನಿ ಟ್ರ್ಯಾಕ್ಟರ್, ಬೆಸ್ಕಾಂ ಇಲಾಖೆಯ ಬೆಳಕು ಯೋಜನೆಯಡಿ ಪ್ರಮಾಣಪತ್ರ, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ ಹಾಗೂ ಲೇಬರ್ ಕಾರ್ಡ್‍ಗಳನ್ನು ವಿತರಿಸಲಾಯಿತು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹಾಗೂ ಅಧಿಕಾರಿ ವರ್ಗದವರು ಹಾಲೇನಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.
ಗ್ರಾಮಪಂಚಾಯತಿ ಅಧ್ಯಕ್ಷ ಎಂ.ಡಿ. ಮಂಜುನಾಥ್, ಉಪಾಧ್ಯಕ್ಷ ಶಿವಕುಮಾರ್, ಉಪವಿಭಾಗಾಧಿಕಾರಿ ಕಲ್ಪಶ್ರೀ, ಭೂದಾಖಲೆಗಳ ಇಲಾಖೆ ಞ
ಉಪನಿರ್ದೇಶಕ ಸುಜಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನ, ತೋಟಗಾರಿಕೆ ಉಪನಿರ್ದೇಶಕ ರಘು, ಕಾರ್ಮಿಕಾಧಿಕಾರಿ ಡಾ. ರಮೇಶ್, ರೇಷ್ಮೆ ಉಪನಿರ್ದೇಶಕ ಬಾಲಕೃಷ್ಣ, ತಹಶೀಲ್ದಾರ್ ಚಂದ್ರಶೇಖರ್, ನಗರಸಭೆ ಆಯುಕ್ತ ಉಮಾಕಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

(Visited 1 times, 1 visits today)