ತುಮಕೂರು


ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ(ರಿ) ತುಮಕೂರು ಜಿಲ್ಲಾ ಘಟಕದ ಉದ್ಘಾಟನೆ, ಶ್ರೀವೀರಭದ್ರಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಸೆಪ್ಟಂಬರ್ 20ರ ಮಂಗಳವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ(ರಿ)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ವೀರಪ್ಪದೇವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸೆಪ್ಟಂಬರ್ 20ರ ಮಂಗಳವಾರ ಬೆಳಗ್ಗೆ 8 ಗಂಟೆ ನಗರದ ಟೌನ್‍ಹಾಲ್ ವೃತ್ತದಿಂದ ಶ್ರೀವೀರಭದ್ರಸ್ವಾಮಿ ಅವರ ಮೂರ್ತಿಯನ್ನು ಬೆಳ್ಳಿ ಸಾರೋಟಿನಲ್ಲಿ ಇಟ್ಟು, ಅಶೋಕ ರಸ್ತೆ,ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ರಸ್ತೆ ಮೂಲಕ ಜೆ.ಸಿ.ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟದವರೆಗೆ ಮೆರವಣಿಗೆ ನಡೆಸಲಾಗುವುದು ಎಂದರು.
ಸೆಪ್ಟಂಬರ್ 20ರ ಮಂಗಳವಾರ ಬೆಳಗ್ಗೆ 10:30ಕ್ಕೆ ನಡೆಯುವ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ(ರಿ) ಇದರ ತುಮಕೂರು ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಸಿದ್ದಗಂಗ ಮಠದ ಶ್ರೀಸಿದ್ದಲಿಂಗಮಹಾಸ್ವಾಮೀಜಿ,ಯಡಿಯೂರಿನ ಶ್ರೀರೇಣುಕ ಶಿವಾಚಾರ್ಯ ಮಹಾಸ್ವಾಮೀಜಿ, ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ,ದೊಡ್ಡಗುಣಿಯ ಶ್ರೀರೇವಣ್ಣಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯಸ್ವಾಮೀಜಿ,ಹಾಗೂ ತೆವಡೇಹಳ್ಳಿಯ ಶ್ರೀಚನ್ನಬಸವೇಶ್ವರ ಮಹಾಸ್ವಾಮೀಜಿ ವಹಿಸುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಚನ್ನೇಶ ಶಾಸ್ತ್ರಿಗಳು ವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಗಳನ್ನು ದೇವರಾಜ ಶಾಸ್ತ್ರಿಗಳು ನುಡಿಯಲಿದ್ದು,ಅಖಿಲ ಕರ್ನಾಟಕ ವೀರಶೈವ ಪುರೋಹಿತರ ಮಹಾಸಭಾ(ರಿ)ತುಮಕೂರು ಜಿಲ್ಲಾಶಾಖೆಯನ್ನು ಸಂಸದ ಜಿ.ಎಸ್.ಬಸವರಾಜು ಉದ್ಘಾಟಿಸುವರು.ಪ್ರತಿಜ್ಞಾ ವಿಧಿಯನ್ನು ರಾಜ್ಯ ಪ್ರಧಾನಕಾರ್ಯದರ್ಶಿ ಕೆ.ಎಸ್.ವೀರಪ್ಪದೇವರು ಬೋಧಿಸಲಿದ್ದು,ಜಿಲ್ಲಾ ಸಂಘ ಬೆಳೆದು ಬಂದ ಹಾದಿ ಕುರಿತು ಅಕವೀಪು ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರೇಶ್ ಶಾಸ್ತ್ರಿಗಳು ವಿವರ ನೀಡುವರು ಎಂದು ಕೆ.ಎಸ್.ವೀರಪ್ಪದೇವರು ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸಚಿವರು,ಶಾಸಕರು,ಮಾಜಿ ಶಾಸಕರು,ಜಿ.ಪಂ.,ತಾಪಂ.ಸದಸ್ಯರುಗಳು, ಮಹಾನಗರಪಾಲಿಕೆ ಕೌನ್ಸಿಲರ್ಸ್‍ಗಳು ಹಾಗೂ ಮುಖಂಡರು ಉಪಸ್ಥಿತರಿರುವರು.ಇದೇ ವೇಳೆ ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೀರಶೈವ ಪುರೋಹಿತರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೆರವೇರಿಸಲಾಗುವುದು.
ಅಸಂಘಟಿತರಾಗಿರುವ ವೀರಶೈವ ಪುರೋಹಿತರನ್ನು ಒಗ್ಗೂಡಿಸಿ,ಸರಕಾರದ ಸವಲತ್ತುಗಳನ್ನ ಪಡೆಯುವ ನಿಟ್ಟಿನಲ್ಲಿ ಹಲವು ಮನವಿಗಳನ್ನು ಇದೇ ಸಂದರ್ಭದಲ್ಲಿ ಮಂಡಿಸಲಾಗುವುದು ಎಂದು ಕೆ.ಎಸ್.ವೀರಪ್ಪದೇವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ(ರಿ) ಜಿಲ್ಲಾಧ್ಯಕ್ಷ ರುದ್ರೇಶ್,ನಿರ್ದೇಶಕರುಗಳು ಉಪಸ್ಥಿತರಿದ್ದರು.

(Visited 1 times, 1 visits today)