ತುಮಕೂರು


ಬಿಲ್ಲವ,ನಾಮಧಾರಿ,ಈಡಿಗ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಈಡಿಗ ಸಮುದಾಯದಲ್ಲಿ ಸಂಕಷ್ಟಗಳ ನಡುವೆಯೂ ಸಾಧನೆ ಮಾಡಿದ ಅನೇಕ ಸಾಧಕರಿದ್ದಾರೆ. ಹಾಗಾಗಿ ನಮ್ಮದು ಹಿಂದುಳಿದ ಸಮಾಜ ಎಂಬ ಕೀಳಿರಿಮೆಯನ್ನು ನಾವೆಲ್ಲರೂ ಮರೆತು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯಲು ಪ್ರಯತ್ನಿಸಬೇಕಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘ(ರಿ),ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ(ರಿ),ಜಗದ್ಗುರು ಶ್ರೀನಾರಾಯಣಗುರು ಸಮಾಜಟ್ರಸ್ಟ್(ರಿ),ಹಾಗೂ ಬ್ರಹ್ಮಶ್ರೀನಾರಾಯಣಗುರು ಜಿಲ್ಲಾ ಜಯತೋತ್ಸವ ಸಮಿತಿ ಆಯೋಜಿಸಿದ್ದ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಿಕ್ಕಾಗ ಸಮಾಜದ ಕಡೆಗೂ ಗಮನಹರಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ಒಂದು ಸಮಾಜ ಬೆಳವಣಿಗೆ ಹೊಂದಬೇಕಾದರೆ,ಕೆಲ ಸಮುದಾಯಗಳ ಸಹಕಾರವೂ ಇರುತ್ತದೆ.ಅದರಲ್ಲಿಯೂ ತಳ ಸಮುದಾಯಗಳ ಬೆಳವಣಿಗೆಯಲ್ಲಿ,ಇತರೆ ಸಮುದಾಯಗಳ ಪಾತ್ರವನ್ನು ನಾವು ಕಡೆಗಣಿಸುವಂತಿಲ್ಲ.ಕಲಾವಿದರಾಗಿ ಡಾ.ರಾಜ್‍ಕುಮಾರ್,ಪುನಿತ್ ರಾಜಕುಮಾರ್,ರಾಜಕಾರಣಿಗಳಾಗಿ ಬಂಗಾರಪ್ಪ,ಆರ್.ಎಲ್.ಜಾಲಪ್ಪ,ಕಾಗೋಡುತಿಮ್ಮಪ್ಪ ಸೇರಿದಂತೆ ನಮ್ಮ ಸಮುದಾಯದ ಹಲವರು ತಮ್ಮ ಜಾತಿ,ಭಾಷೆ ಎಲ್ಲವನ್ನು ಮೀರಿ ಬೆಳೆದವರು. ಅತಿ ಚಿಕ್ಕವಯಸ್ಸಿನಲ್ಲಿಯೇ ಅಪ್ಪು ಮಾಡಿದ ಸಾಧನೆ ನಾವ್ಯಾರು ಮರೆಯುವಂತಿಲ್ಲ.ಕುಲಕಸುಬಿಗೆ ಅಂಟಿಕೊಂಡಿದ್ದ ಸಮುದಾಯದಲ್ಲಿ ಉದ್ದಿಮೆದಾರರು, ಶಿಕ್ಷಣ ತಜ್ಞರುಗಳನ್ನು ನಾವು ಕಾಣುತಿದ್ದವೆ.ಬಂಗಾರಪ್ಪ ಅವರ 20 ಅಂಶಗಳ ಕಾರ್ಯಕ್ರಮ ಇಡೀ ದೇಶದಲ್ಲಿಯೇ ಅತ್ಯುತ್ತಮ ಕಾರ್ಯಕ್ರಮಗಳು ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ ಎಂದು ಕುಮಾರಬಂಗಾರಪ್ಪ ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ,ಬ್ರಹ್ಮಶ್ರೀ ನಾರಾಯಣಗುರುಗಳು,ದೇವರ ನಾಡು ಎಂದು ಕರೆಯಿಸಿಕೊಳ್ಳುತಿದ್ದ ಕೇರಳದಲ್ಲಿ ಒಂದೇ ಜಾತಿ,ಒಂದೇ ಧರ್ಮ,ಒಂದೇ ದೇವರ ಎಂಬ ತತ್ವದ ಮೂಲಕ ಹಲವಾರು ಸಾಮಾಜಿಕ ಪರಿವರ್ತನೆಗಳನ್ನು ಮಾಡಿದರು.ಶಿಕ್ಷಣ ಮತ್ತು ಧಾರ್ಮಿಕ ಕ್ರಾಂತಿಯ ಮೂಲಕ ದೇವರ ನಾಡಿನಲ್ಲಿ ನಡೆಯುತ್ತಿದ್ದು, ಮೌಢ್ಯ, ಕಂದಾಚಾರ,ಆನಾಚಾರಗಳಿಗೆ ಕಡಿವಾಣ ಹಾಕಿ, ಅಲ್ಲಿನ ಜನರನ್ನು ಜಾಗೃತಗೊಳಿಸಿ, ಸಾಕ್ಷರರ ನಾಡಾಗಿಸಿದ ಕೀರ್ತಿ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಸಲ್ಲುತ್ತದೆ ಎಂದರು.
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ತುಮಕೂರು ವಿವಿ ಸಂಶೋಧನಾ ನಿರ್ದೇಶಕ ಡಾ.ರಮೇಶ್ ಸಾಲಿಯಾನ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ಅಜಯಕುಮಾರ್ ವಹಿಸಿದ್ದರು. ದಿವ್ಯಸಾನಿಧ್ಯವನ್ನು ಸೋಲೂರಿನ ಶ್ರೀವಿಖ್ಯಾತನಂದಸ್ವಾಮೀಜಿ ವಹಿಸಿದ್ದರು.ವೇದಿಕೆಯಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ,ಬಿಲ್ಲವ ಅಸೋಸಿಯೇಷನ್‍ನ ವೇದಕುಮಾರ್, ಜೆಪಿ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಲಕ್ಷ್ಮಿನರಸಿಂಹಯ್ಯ, ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಎಂ.ಕೆ.ವೆಂಕಟಸ್ವಾಮಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ,ಮೈಸೂರು ಡೈಯರ್ ಟೆಕ್‍ನ ಎಂ.ಡಿ.ಸದಾಶಿವ ಆರ್.ಅಮೀನ್,ಮಾಜಿ ಸಚಿವ ಸೊಗಡು ಶಿವಣ್ಣ,ಜೆಡಿಎಸ್ ಮುಖಂಡ ಎನ್.ಗೋವಿಂದರಾಜು,ಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಕನ್ನಡ ಸೇನೆಯ ಧನಿಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

(Visited 1 times, 1 visits today)