ತುಮಕೂರು


ಶಿಕ್ಷಣದ ಜತೆಗೆ ಕ್ರೀಡೆಯನ್ನು ನಾನಾ ಮಜಲುಗಳಲ್ಲಿ ಜೋಡಣೆ ಮಾಡಿದರೆ ಮಾತ್ರ ಕ್ರೀಡೆ ಬೆಳೆಯಲು ಮತ್ತು ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ಸಾಧ್ಯ. ಸರ್ಕಾರ ಪರಿಣಾಮಕಾರಿಯಾದ ‘ಕ್ರೀಡಾನೀತಿ’ ಜಾರಿಗೊಳಿಸಲು ಮುಂದಾಗಬೇಕು ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.
ನಗರದ ರವೀಂದ್ರ ಕಲಾನಿಕೇತನದಲ್ಲಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ 10 ತಾಲ್ಲೂಕುಗಳ ಕ್ರೀಡಾಸಕ್ತರು, ತರಬೇತುದಾರರು, ಕ್ರೀಡಾಪಟುಗಳೊಂದಿಗೆ ಮಂಗಳವಾರ ಸಭೆ ನಡೆಸಿ ಚರ್ಚಿಸಿದ ಅವರು, ‘ಕ್ರೀಡಾನೀತಿ’ ಜಾರಿಗೊಳಿಸಬೇಕೆಂಬ ಉದ್ಧೇಶವನ್ನಿಟ್ಟುಕೊಂಡು ಸರ್ಕಾರದ ಮೇಲೆ ಒತ್ತಡ ಹೇರಲು ಇಂದು ಇಲ್ಲಿ ಸಭೆ ಸೇರಿ ಚರ್ಚಿಸಲಾಗುತ್ತಿದೆ ಎಂದರು.
ಪ್ರತಿ ಪಂಚಾಯಿತಿ ಮಟ್ಟದಲ್ಲೂ ಬಿಪಿಎಡ್, ಎಂಪಿಎಡ್ ತರಬೇತಿ ಹೊಂದಿದ ತರಬೇತುದಾರರನ್ನು ಇಬ್ಬರು ಅಥವಾ ಮೂವರು ಅಭ್ಯರ್ಥಿಗಳನ್ನು ಸರ್ಕಾರದ ವತಿಯಿಂದ ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು, ತಾಲ್ಲೂಕುಗಳಲ್ಲಿರುವ ಕ್ರೀಡಾಂಗಣಗಳನ್ನು ಸುವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲು ಕ್ರೀಡಾಂಗಣದ ಸುತ್ತಲೂ ಫೆನ್ಸಿಂಗ್ ಅಳವಡಿಸುವುದು, ಶೌಚಾಲಯಗಳು, ನೀರಿನ ವ್ಯವಸ್ಥೆ, ಸೂಪರ್ ವೈಸರ್, ಸೆಕ್ಯುರಿಟಿ ವ್ಯವಸ್ಥೆ ಸೇರಿದಂತೆ ಕನಿಷ್ಠ ಸೌಲಭ್ಯಗಳು ದೊರಕುವಂತಾಗಬೇಕು, ಹಾಗೆಯೇ ಕ್ರೀಡಾಂಗಣ ನಿರ್ವಹಣೆಗಾಗಿ ಸ್ಥಿರ ಠೇವಣಿ ಇಡುವಂತಹ ಕೆಲಸಗಳಾಗಬೇಕು ಎಂದು ಹೇಳಿದರು.
ತುಮಕೂರಿಗೆ ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಗೋಪಾಲಕೃಷ್ಣ ಅವರು ತುಮಕೂರಿಗೆ ಆಗಮಿಸುತ್ತಿದ್ದಾರೆ. ತುಮಕೂರು ನಗರವೂ ಸೇರಿದಂತೆ ಎಲ್ಲಾ 10 ತಾಲ್ಲೂಕುಗಳ ಪ್ರತಿನಿಧಿಗಳು ಸೇರಿ ಅವರೊಂದಿಗೆ ಆರೋಗ್ಯಕರವಾದ ಚರ್ಚೆ ನಡೆಸುವ ಸಂಬಂಧ ಇಂದು ಪೂರ್ವಬಾವಿಯಾಗಿ ಎಲ್ಲರೂ ಸಭೆ ಸೇರಿ ಕ್ರೀಡಾನೀತಿ ಅನುಷ್ಠಾನ ಮಾಡುವಂತೆ ಒತ್ತಾಯಿಸಲಾಗುವುದು. ಅದರಲ್ಲೂ ತುಮಕೂರು ಜಿಲ್ಲೆಯಿಂದಲೇ ಪೈಲೆಟ್ ಪ್ರಾಜೆಕ್ಟ್ ಆಗಿ ಅನುಷ್ಠಾನಗೊಳ್ಳಲಿ ಎಂಬುದೇ ನಮ್ಮೆಲ್ಲರ ಒತ್ತಾಸೆಯಾಗಿದೆ ಎಂದರು.
ಚಿಕ್ಕನಾಯಕನಹಳ್ಳಿಯ ಚಂದ್ರಶೇಖರ್ ಮತ್ತು ಗುಬ್ಬಿಯ ಸಿ.ಆರ್.ಶಂಕರ್‍ಕುಮಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಬೇಕೆಂದು ಹಂಬಲಿಸುತ್ತಾರೆಯೇ ವಿನಃ ಮಕ್ಕಳು ದೈಹಿಕವಾಗಿ ಸದೃಢವಾಗಲು ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಪ್ರೋತ್ಸಾಹ ನೀಡುವುದು ಬಹಳ ಕಡಿಮೆ. ಆದುದರಿಂದ ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ಹಲವು ಕ್ರೀಡಾ ತರಬೇತುದಾರರು ಹಾಗೂ ಕ್ರೀಡಾ ಇಲಾಖೆಯ ನಿವೃತ್ತ ಅಧಿಕಾರಿಗಳು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಯಂಗ್ ಚಾಲೆಂಜರ್ಸ್ ಸಂಸ್ಥೆ ಅಧ್ಯಕ್ಷ ವೇಣುಗೋಪಾಲ ಕೃಷ್ಣ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಂ. ಚಂದ್ರಶೇಖರ್, ಗುಬ್ಬಿ ಚನ್ನಬಸವೇಶ್ವರ ಯುವಕರ ಸಂಘ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್, ಡಾ.ಅರುಂಧತಿ, ನಿವೃತ್ತ ದೈಹಿಕ ಶಿಕ್ಷಕ ಪದ್ಮನಾಭ್, ಪ್ರಭಾಕರ್, ಎಂ.ಬಿ.ಪರಮೇಶ್ವರಪ್ಪ, ತುಮಕೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಹೆಚ್.ಎನ್.ಲೋಕೇಶ್ ಸೇರಿದಂತೆ ನಗರವೂ ಸೇರಿದಂತೆ ಎಲ್ಲಾ 10 ತಾಲ್ಲೂಕುಗಳ ಕ್ರೀಡಾಸಕ್ತರು, ತರಬೇತುದಾರರು, ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

(Visited 1 times, 1 visits today)