ತುಮಕೂರು:
ದೇಶದಲ್ಲಿರುವ ಎಲ್ಲ ವರ್ಗದ ಜನರೂ ನಾವೆಲ್ಲ ರೈತರು ಎಂದು ಹೇಳಿಕೊಳ್ಳಬೇಕಾದ ಅಗತ್ಯ ಒದಗಿಬಂದಿದೆ. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲವಾಗಿದೆ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.
ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ವತಿಯಿಂದ ತುಮಕೂರು ನಗರದ ಮಾಕಂ ಕಲ್ಯಾಣ ಮಂದಿರದಲ್ಲಿ ಡಿಸೆಂಬರ್ 8ರಂದು ನಡೆದ ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ ವಿಷಯ ಕುರಿತು ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತ ವರ್ಗವನ್ನು ವಿಸ್ತರಿಸಬೇಕಾಗಿದೆ. ರೈತರು ಎಂಬ ಪದದ ವ್ಯಾಪ್ತಿಯಲ್ಲಿ ಭೂರಹಿತರೈತರು, ಗೇಣಿರೈತರು, ಭೂಮಿ ಇರುವ ರೈತರು, ರೈತ ಮಹಿಳೆಯರು, ಆದಿವಾಸಿ ರೈತರು, ಕೂಲಿ ಮಾಡುವ ರೈತರು ಹೀಗೆ ರೈತರ ನೆಲೆಯನ್ನು ವಿಸ್ತರಿಸುತ್ತ ಹೋಗಬೇಕು. ಆಮೂಲಕ ರೈತರಿಗೆ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಬರಹಗಾರರು, ವೈದ್ಯರು ಸಾಹಿತಿಗಳ ಎದುರು ಹಲವಾರು ಸವಾಲುಗಳು ಇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಅಭಿವ್ಯಕ್ತಿಗೆ ಆತಂಕ ಸೃಷ್ಟಿಯಾಗಿದೆ. ಲೇಖಕರನ್ನು ಹತ್ಯೆ ಮಾಡುವಂತಹ ಕೆಲಸ ನಡೆದಿದೆ. ದಾಬೋಲ್ಕರ್, ಪನ್ಸಾರೆ, ಎಂಎಂ. ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ದುಷ್ಟಶಕ್ತಿಗಳು ಹತ್ಯೆಮಾಡಿವೆ. ಸ್ವಚ್ಛಂದವಾಗಿ ಅಭಿವ್ಯಕ್ತಿಸಲು ಸವಾಲು ಎದುರಾಗಿದೆ ಎಂದರು.
ಕಾರ್ಪೋರೇಟ್ ಸಂಸ್ಥೆಗಳ ಬದಲು ಲಾಭರಹಿತ ಸಂಸ್ಥೆಗಳನ್ನು ಬೆಂಬಲಿಸಬೇಕಾಗಿದೆ. ಕಾರ್ಪೋರೇಟ್ ಸಂಸ್ಥೆಗಳ ಒಡೆತನ ಕೆಲವೇ ವ್ಯಕ್ತಿಗಳಿಗೆ ಸೇರಿದೆ. ಹಾಗಾಗಿ ನಾವು ಕಾರ್ಪೋರೇಟ್ ಅಲ್ಲದ ಸಂಸ್ಥೆಗಳನ್ನು ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಅಭಿಪ್ರಾಯಪಟ್ಟರು.
ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದೊದಗಿದೆ. ಸ್ವಾತಂತ್ರ್ಯ ನಮ್ಮ ಕೈಯಲ್ಲಿ ಇಲ್ಲವಾಗಿದೆ. ಖಾಸಗೀತನವು ಇಲ್ಲವಾಗಿದೆ. ಎಲ್ಲವೂ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿದೆ. ಆಧಾರ್ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕಾರ್ಫೋರೇಟ್ ಶಕ್ತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಹಿಡಿತಕ್ಕೆ ತೆಗೆದುಕೊಂಡು ಎಲ್ಲವನ್ನೂ ನಿಯಂತ್ರಿಸುತ್ತಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹತ್ವದ ಮಾಧ್ಯಮ ಮತ್ತು ಒಳ್ಳೆಯ ಮಾಧ್ಯಮವೆಂದು ಎರಡು ಬಗೆಗಳಿವೆ. ಜನರ ಕಷ್ಟ ಸುಖಗಳನ್ನು, ಜನರ ನಾಡಿ ಮಿಡಿತವನ್ನು ಪ್ರತಿನಿಧಿಸುವುದೇ ಈ ಮಾಧ್ಯಮದ ಕೆಲಸವಾಗಿದೆ. ಇದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಭಗತ್ ಸಿಂಗ್ ಉದಾಹರಣೆಯಾಗಿದ್ದಾರೆ ಎಂದು ವಿವರಿಸಿದರು. ಒಳ್ಳೆಯ ಮಾಧ್ಯಮ ಸಮಾಜದಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತದೆ. ದೌರ್ಬಲ್ಯಗಳನ್ನು ಜನರ ಮುಂದಿಡುತ್ತದೆ. ಆಗ ಜನರ ಸಮಸ್ಯೆಗಳೇನೆಂಬುದು ಜನರಿಗೆ ತಿಳಿಯುತ್ತದೆ ಎಂದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ನಾಡೋಜ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ ಎಲ್ಲವೂ ಉದ್ಯಮವಾಗಿ ಪರಿವರ್ತನೆಯಾಗಿದೆ. ಚಲನಚಿತ್ರೋದ್ಯಮ, ಪತ್ರಿಕೋದ್ಯಮ, ಪುಸ್ತಕೋದ್ಯಮವಾಗಿರುವುದರಿಂದ ಸಮಸ್ಯೆ ತಲೆದೋರಿದೆ ಎಂದರು.
ಬಂಡಾಯ ಎಂದರೆ ವಿರೋಧವಲ್ಲ. ಬಂಡಾಯವೆಂದರೆ ಪ್ರತಿಭಟನೆಯಲ್ಲ. ಆಡಂಬರವೂ ಅಲ್ಲ. ಬಂಡಾಯವೆಂದರೆ ಬದಲಾವಣೆ. ಸಮಾಜದಲ್ಲಿ ಬದಲಾವಣೆಯನ್ನು ಬಯಸುವುದೇ ಬಂಡಾಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಜನಪರ ಚಿಂತಕ ಕೆ.ದೊರೈರಾಜ್ ಮತ್ತು ಲೇಖಕಿ ಬಾ.ಹ.ರಮಾಕುಮಾರಿ ಹಾಜರಿದ್ದರು. ಜಿಲ್ಲಾ ಸಂಚಾಲಕ ಡಾ.ಓ.ನಾಗರಾಜ್ ಸ್ವಾಗತಿಸಿ, ಡಾ.ನಾಗಭೂಷನ್ ಬಗ್ಗನಡು ನಿರೂಪಿಸಿದರು. ಪ್ರಾಧ್ಯಾಪಕ ತಿಪ್ಪೇಸ್ವಾಮಿ ವಂದಿಸಿದರು.
ಮೊದಲ ಗೋಷ್ಠಿ ನಡೆಯಲಿಯಲ್ಲಿ ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಹೊಣೆ ವಿಷಯ ಕುರಿತು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಉಪನ್ಯಾಸ ನೀಡಿ ಮಾತನಾಡಿ ಮಾಧ್ಯಮ ಸಂಸ್ಥೆಗಳು ಬೇರೆ ಬೇರೆ ಹೆಸರುಗಳನ್ನು ಹೊಂದಿದ್ದರೂ ಅವೆಲ್ಲವೂ ಒಬ್ಬ ವ್ಯಕ್ತಿಯ ಒಡತನಕ್ಕೆ ಸೇರಿವೆ. ಕಾರ್ಪೋರೇಟ್ ಸಂಸ್ಥೆಯನ್ನು ಹೊಂದಿರುವ ಒಬ್ಬ ವ್ಯಕ್ತಿಯೇ ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲು ಹೂಡಿಕೆ ಮಾಡಿದ್ದಾರೆ. ಇದು ನಮ್ಮ ಮುಂದಿರುವ ಸವಾಲು ಎಂದು ಹೇಳಿದರು.
ದೀಪಿಕಾ ಪಡುಕೋಣೆ ಸೌಂದರ್ಯ, ಅವರ ಊಟ, ಉಡುಪು ಸುದ್ದಿಯಾಗುತ್ತದೆ. ರೈತರ ಸಮಸ್ಯೆಗಳ ಕುರಿತು ಸುದ್ದಿಯಾಗುವುದಿಲ್ಲ. ಟಿಆರ್‍ಪಿ ಹೆಸರಲ್ಲಿ ಜನರಿಗೆ ಬೇಡವಾದ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದನ್ನು ಯಾಕೆ ಪ್ರಸಾರ ಮಾಡುತ್ತಿದ್ದೀರಿ,. ಇದರಿಂದ ಯಾರಿಗೆ ಪ್ರಯೋಜನವಾಗಲಿದೆ ಎಂಬುದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಪ್ರತಿದಿನ ಬೆಳಗ್ಗೆ ಯಾವ ಟಿವಿಗಳನ್ನು ನೋಡಿದರೂ ಜ್ಯೋತಿಷ್ಯದ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಬಿಗ್‍ಬಾಸ್ ಪ್ರಸಾರವಾಗುತ್ತದೆ. ಇದನ್ನು ಜನರು ಅನಿವಾರ್ಯವಾಗಿ ನೋಡಬೇಕಾಗಿದೆ. ಇದೆಲ್ಲವೂ ಟಿಆರ್‍ಪಿ ಮತ್ತು ಹಣ ಮಾಡುವ ಉದ್ದೇಶವಾಗಿದೆ ಎಂದರು.
ಯಾವುದೇ ಸಂಸ್ಥೆಗಳನ್ನು ಆರಂಭಿಸಬೇಕಾದರೆ ಹಣ ಮುಖ್ಯವಾಗಿದೆ. ಹಣವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತು.ಆದರೆ ನಾವು ಯಾರ ಪರವಾಗಿ ಸುದ್ದಿಗಳನ್ನು ಕೊಡುತ್ತಿದ್ದೇವೆ ಎಂಬ ಬಗ್ಗೆಯೂ ಆಲೋಚನೆ ಮಾಡಬೇಕಾಗಿದೆ. ಪತ್ರಕರ್ತರು ಇಂದು ಹಲವು ರೀತಿಯ ಸವಾಲುಗಳನ್ನು ಎದುರಿಸುವ ಜೊತೆಗೆ ಪತ್ರಕರ್ತರು ಸುದ್ದಿ ವಾಸನೆ ಹಿಡಿಯದಂತಾಗಿದ್ದಾರೆ. ಯಾರೂ ನಿಜವಾದ ಸುದ್ದಿ ಯಾವುದು ಎಂಬ ವಾಸನೆಯೇ ಪತ್ರಕರ್ತರಿಗೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ಇದೆ ಎಂದು ವಿಷಾದಿಸಿದರು.
ಮಾಧ್ಯಮಲೋಕ ರಾತ್ರೋರಾತ್ರಿ ಬದಲಾವಣೆಯಾಗಿದೆ. ಕ್ರಾಂತಿಕಾರಕ ಬದಲಾವಣೆಯಿಂದ ಪತ್ರಕರ್ತರು ಸವಾಲು ಎದುರಿಸುವಂತೆ ಆಗಿದೆ. ಕಾಪೋರೇಟ್ ಸಂಸ್ಕøತಿಯಿಂದ ನಿಜವಾದ ಸುದ್ದಿಗಳಿಗೆ ಜಾಗವೇ ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶದ ಸಮಸ್ಯೆಗಳು ಒಳಪುಟಗಳ ಯಾವುದೋ ಮೂಲೆಯಲ್ಲಿ ಬರುತ್ತಿವೆ. ಮಾಧ್ಯಮ ಸಂಸ್ಥೆಗಳು ಮುಖಪುಟದಲ್ಲಿ ಜಾಹಿರಾತು ಪ್ರಕಟಿಸುತ್ತಿವೆ ಎಂದು ಮಾಧ್ಯಮಲೋಕದ ವಿವರ ನೀಡಿದರು.
ಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಬಿ.ರಾಜಶೇಖರಮೂರ್ತಿ ಮತ್ತು ಸಾಹಿತಿ ಮಲ್ಲಿಕಾರ್ಜುನ ಮಾನ್ಪಡೆ ಸಹಸ್ಪಂದನ ವ್ಯಕ್ತಪಡಿಸಿದರು. ಉಪನ್ಯಾಶಕಿ ಶ್ವೇತಾರಾಣಿ ಸ್ವಾಗತಿಸಿ ನಿರೂಪಿಸಿದರು. ಅಮರ್ ಹಫೀಜ್ ವಂದಿಸಿದರು.