ಪಾವಗಡ
ಕೋವಿಡ್ ಪಿಡುಗಿನ ನಂತರ ಯಥಾ ಪ್ರಕಾರ ಪ್ರತಿ ಎರಡು ತಿಂಗಳಿಗೊಮ್ಮೆ ಕುಷ್ಠರೋಗದಿಂದ ಮುಕ್ತರಾಗಿ ದುರದೃಷ್ಟವಶಾತ್ ಅಂಗವೈಕಲ್ಯವನ್ನು ಪಡೆದಂತಹವರಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರ ಚಿಕಿತ್ಸೆ ಹಾಗೂ ಫಿಜಿಯೋಥೆರಪಿ ಮತ್ತು ಔಷಧೋಪಚಾರಗಳನ್ನು ಕಳೆದ ಮೂರು ದಶಕಗಳಿಂದ ನೀಡುತ್ತಾ ಬಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಳೆದ ವರ್ಷದಿಂದ ಮತ್ತೆ ಈ ಶಸ್ತ್ರ ಚಿಕಿತ್ಸೆಗಳು ಆರಂಭವಾಗಿದ್ದು ದೂರದ ರಾಯಚೂರು, ಗುಲ್ಬರ್ಗಾ, ಚಾಮರಾಜನಗರ, ಬಳ್ಳಾರಿ ಹಾಗೂ ಗಡಿನಾಡು ಪ್ರದೇಶವಾದ ಆಂಧ್ರಪ್ರದೇಶದಿಂದ ರೋಗಿಗಳು ಸಂಪೂರ್ಣ ಉಚಿತವಾದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮವಾದ, ಮತ್ತೆಲ್ಲದಕ್ಕಿಂತ ಮಿಗಿಲಾಗಿ ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರ ಚಿಕಿತ್ಸೆಗಳನ್ನು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈವರೆವಿಗೆ 584 ರೋಗಿಗಳಿಗೆ ಅವರ ಅಂಗವೈಕಲ್ಯತೆಯನ್ನು ದೂರವಾಗಿಸಿ ಸಮಾಜದಲ್ಲಿ ಎಲ್ಲರಂತೆ ಬದುಕಿ ಬಾಳುವ ಅವಕಾಶವನ್ನು ನೀಡಲಾಗುತ್ತಾ ಬರುತ್ತಿದೆ. ಕಳೆದ ವಾರವಷ್ಟೇ ಮತ್ತೊಂದು ತಂಡ ಈ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದು ಸುಮಾರು ಎರಡು ತಿಂಗಳು ಊಟೋಪಚಾರ ಹಾಗೂ ಔಷಧೋಪಚಾರ ಮತ್ತು ಫಿಜಿಯೋಥೆರಪಿ ಮುಂತಾದ ಪ್ರಕ್ರಿಯೆಗಳಿಗೆ ಒಳಗಾಗುತ್ತಾರೆ. ಇವರೊಂದಿಗೆ ಸಹಚರರೂ ಸಹ ಜೊತೆಯಲ್ಲಿದ್ದು ಎಲ್ಲವನ್ನೂ ಉಚಿತವಾಗಿ ಪಡೆಯುತ್ತಿರುವುದು ಗಮನಾರ್ಹವಾಗಿದೆ. ಈ ಕಾರ್ಯಕ್ರಮ ಮುಂದೆಯೂ ಸಹ ನಡೆದುಕೊಂಡು ಬರುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಸ್ವಾಮಿ ಜಪಾನಂದಜೀ ರವರು ತಿಳಿಸಿದರು. ಇದೇ ಸಂದರ್ಭದಲ್ಲಿ ಪಾವಗಡದಂತಹ ಪ್ರದೇಶದಲ್ಲಿ ಇಡೀ ಕರ್ನಾಟಕದಲ್ಲಿ ಈ ತೆರನಾದ ಶಸ್ತ್ರ ಚಿಕಿತ್ಸೆ ಎಲ್ಲಿಯೂ ದೊರಕುವುದಿಲ್ಲ. ಕೇವಲ ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ದೊರೆಯುತ್ತಿರುವುದು ಆಸ್ಪತ್ರೆಯ ಸೇವಾ ಯಜ್ಞಕ್ಕೆ ಒಂದು ಕೈಗನ್ನಡಿಯಾಗಿದೆ. ಅತ್ಯಂತ ನಿಪುಣತೆಯನ್ನು ಪಡೆದ ಹಾಗೂ ಪ್ರಸಿದ್ದ ವೈದ್ಯರುಗಳು ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುತ್ತಿದ್ದಾರೆ. ಇದಕ್ಕೆ ಡೇಮಿಯನ್ ಫೌಂಡೇಷನ್ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಹಕಾರ ನೀಡುತ್ತಿದೆ.