ಕೊರಟಗೆರೆ:
ಕರುನಾಡಿನ ಪುಣ್ಯಕ್ಷೇತ್ರ ಶ್ರೀಗೊರವನಹಳ್ಳಿ ಮಹಾಲಕ್ಷ್ಮೀ ದೇವಿಯ ಬ್ರಹ್ಮ ರಥೋತ್ಸವ ಮತ್ತು ಲಕ್ಷ ದಿಪೋತ್ಸವ ಕಾರ್ಯಕ್ರಮ ಕಾರ್ತಿಕ ಮಾಸದ ಕೊನೆಯ ಶುಕ್ರವಾರ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಕಲ್ಪತರು ನಾಡು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸುಪ್ರಸಿದ್ದ ಪ್ರವಾಸಿ ಪುಣ್ಯಕ್ಷೇತ್ರ ಆಗಿರುವ ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿದಾನಕ್ಕೆ ಶುಕ್ರವಾರ ಮುಂಜಾನೆಯಿಂದ ರಾತ್ರಿ 8ಗಂಟೆಯ ವರೇಗೂ ಸಾವಿರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದರು.
ಶುಕ್ರವಾರ ಮುಂಜಾನೆ 8ಗಂಟೆಯಿಂದ ಪ್ರಾರಂಭವಾದ ವಿಶೇಷ ಪೂಜಾ ಕಾರ್ಯಕ್ರಮ, ಪಂಚಾಮೃತ ಅಭಿಷೇಕ, ಹೋಮ, ಹವನ ಹಾಗೂ ಭಕ್ತರಿಂದ ದೇವಾಲಯಕ್ಕೆ ಮತ್ತು ದೇವಿಗೆ ಹೂವಿನ ಅಲಂಕಾರ ಮಾಡಿಸಲಾಗಿತ್ತು.
ಮಧ್ಯಾಹ್ನ 1ಗಂಟೆಗೆ ಬ್ರಹ್ಮ ರಥೋತ್ಸವ, ಸಂಜೆ ಲಕ್ಷ ದಿಪೋತ್ಸವ ಕಾರ್ಯಕ್ರಮ ಮತ್ತು ರಾತ್ರಿ 8ಗಂಟೆಗೆ ಮುತ್ತಿನ ಪಲ್ಲಕ್ಕಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ, ವೀರಗಾಸೆ, ಭಕ್ತಿಗೀತೆಗಳ ಗಾಯನವನ್ನು ಏರ್ಪಡಿಸಲಾಗಿತ್ತು.
ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ, ನರಸಯ್ಯನಪಾಳ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಆರತಿ ಸೇವೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ದೇವಿಯ ದರ್ಶನ ಪಡೆದರು. ದೇವಾಲಯ ಸಮೀಪದ ದಾಸೋಹದಲ್ಲಿ ಮುಂಜಾನೆಯಿಂದ ರಾತ್ರಿಯ ವರೇಗೆ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಮಧುಗಿರಿ ಎಸಿ ಚಂದ್ರಶೇಖರ್, ತಹಶೀಲ್ದಾರ್ ನಾಗರಾಜು, ಕೋಳಾಲ ಪಿಎಸೈ ಸಂತೋಷ್, ಉಪ ತಹಶೀಲ್ದಾರ್ ಮಧುಚಂದ್ರ, ದೇವಾಲಯದ ಸಿಬ್ಬಂಧಿಗಳಾದ ರಮೇಶ್, ಕೇಶವಮೂರ್ತಿ, ಲಕ್ಷ್ಮಯ್ಯ, ರಂಗಶ್ಯಾಮಯ್ಯ, ಕೃಷ್ನಮೂರ್ತಿ ಸೇರಿದಂತೆ ಸಾವಿರಾರು ಭಕ್ತಾಧಿಗಳು ಇದ್ದರು.