ಕೊರಟಗೆರೆ
ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿನ ಪಾಳ್ಯದ ಹಾಲು ಉತ್ಪಾದಕರ ಸಂಘದ ರಾಸುಗಳ ಗುಂಪು ವಿಮಾ ಯೋಜನೆಯನ್ನು ತುಮಕೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಈಶ್ವರಯ್ಯರವರು ಉದ್ಘಾಟಿಸಿ.
ಮಾತನಾಡಿದ ಅವರು ,ಹಾಲು ಉತ್ಪಾದಕರ ಸಂಘದ ಸಭೆ ಕರೆದಾಗ ಎಲ್ಲ ರೈತರು ಸಭೆಯಲ್ಲಿ ಹಾಜರಾಗಿ ನಿಮ್ಮ ಅನುಕೂಲಕ್ಕಾಗಿ ಇರುವ ಕೆಲವು ಯೋಜನೆಗಳ ಬಗ್ಗೆ ತಿಳಿದುಕೊಳ್ಳುವಂತೆ ಸಲಹೆ ನೀಡಿದರು. ರಾಸುಗಳನ್ನು ಹೇಗೆ ನೋಡಿಕೊಳ್ಳಬೇಕು? ಪೆÇೀಷಣೆ ಹೇಗೆ ಮಾಡಬೇಕು? ವಿಮೆ ಮಾಡಿಸಿದರೆ ರೈತರಿಗೆ ಯಾವ ರೀತಿಯ ಲಾಭ ಇರುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಾರೆ.
ರೈತರು ಸಭೆಗೆ ಹಾಜರಾಗದಿದ್ದರೆ ಈ ಎಲ್ಲ ಮಾಹಿತಿಗಳು ಸಿಗುವುದಿಲ್ಲ. ಆದ್ದರಿಂದ ತಾವೆಲ್ಲರೂ ಸಭೆಗೆ ಹಾಜರಾಗಬೇಕು. ಹಾಗೆ ನಿಮ್ಮ ಮನೆಯ ಎಲ್ಲಾ ರಾಸುಗಳಿಗೂ ವಿಮೆ ಮಾಡಿಸಿ ಹಾಲು ಉತ್ಪಾದಕರ ಸಂಘದಿಂದ ಬರುವ ಅನುಕೂಲಗಳನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗುಂಡಿನ ಪಾಳ್ಯದಲ್ಲಿ ನೂತನ ಹಾಲು ಉತ್ಪಾದಕರ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದರು. 2021-2022ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿರುವ ರೈತರಿಗೆ ಸನ್ಮಾನಿಸಿ ಬಹುಮಾನ ವಿತರಿಸಿದರು. ಅನಾರೋಗ್ಯದಿಂದ ಮೃತಪಟ್ಟ ರಾಸುಗಳ ರೈತರಿಗೆ ವಿಮಾ ಚೆಕ್ ವಿತರಿಸಿದರು. ರಾಸುಗಳು ಅನಾರೋಗ್ಯದಿಂದ ಮೃತಪಟ್ಟಾಗ ವಿಮೆ ಇದ್ದರೆ. ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ರೈತರೂ ಕೂಡ ರಾಸುಗಳಿಗೆ ವಿಮೆ ಮಾಡಿಸಿ ಎಂದು ತಿಳಿಸಿದರು.
ಕೊರಟಗೆರೆ ತಾಲೂಕಿನಲ್ಲಿ 2021-22 ರಲ್ಲಿ 12526 ರಾಸುಗಳಿಗೆ ವಿಮೆ ಮಾಡಿದ್ದು, ಇದುವರೆಗೂ 190 ರಾಸುಗಳು ಅನಾರೋಗ್ಯದಿಂದ ಮರಣ ಹೊಂದಿವೆ. ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಚೆಕ್ ಮೂಲಕ 95 ಲಕ್ಷ ಹಣ ವಿತರಿಸಲಾಗಿದೆ ಹಾಗೂ 2022-23 ನೇ ಸಾಲಿನಲ್ಲಿ 15000 ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಮಂಜುನಾಥ್, ಎಂ.ಎನ್ ಚಂದ್ರಪ್ಪ, ವೆಂಕಟೇಶ್ ಸಿ, ವಿಸ್ತರಣಾಧಿಕಾರಿ ತುಮಕೂರು ಹಾಲು ಒಕ್ಕೂಟ ಮಲ್ಲಸಂದ್ರ ರಂಜಿತ್ ಸಿ, ಶ್ರೀಮತಿ ವನಜಾಕ್ಷಿ ಕೆ ಜಿ, ಎಚ್ ಕೆ ಗಿರೀಶ್, ಶ್ರೀಮತಿ ನೇತ್ರಾವತಿ, ಉಪಾಧ್ಯಕ್ಷರಾದ ಪಾರ್ವತಮ್ಮ ಸೇರಿದಂತೆ ನಿರ್ದೇಶಕರು ಹಾಗೂ ಊರಿನ ಗ್ರಾಮಸ್ಥರು ರೈತರು ಪಾಲ್ಗೊಂಡಿದ್ದರು.