ಗುಬ್ಬಿ
:
ಪಟ್ಟಣ ಪಂಚಾಯಿತಿ ಅಧ್ಯಕ್ಷ ಏಳು ತಿಂಗಳು ಕಳೆದರೂ ಸಭೆಯನ್ನು ಕರೆಯದೇ ಇದ್ದು ಪಟ್ಟಣದ ಅಭಿವೃದ್ಧಿಗೆ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು ಆರಂಭದಿಂದಲೂ ಪಕ್ಷವನ್ನು ಬದಿಗಿಟ್ಟು ಒಕ್ಕೊರಲಿನಿಂದ ಕೆಲಸ ಮಾಡುವಂತೆ ತಿಳಿಸಿದರೂ ಸಹ ರಾಜಕಾರಣ ದ್ವೇಷವನ್ನೇ ಮಾಡುತ್ತಾ ಬಂದು ತಾವೇ ಜೈಲಿಗೆ ಹೋಗುವಂತಹ ಸ್ಥಿತಿಯನ್ನು ತಂದುಕೊಂಡಿರುವುದು ಒಂದೆಡೆಯಾದರೆ, ಭೂ ಹಗರಣದಲ್ಲಿ ತಪ್ಪಿತಸ್ಥನಲ್ಲದೆ ಹೋಗಿದ್ದರೆ ನ್ಯಾಯಾಲಯದ ಮೊರೆ ಹೋಗಿ ಜಾಮೀನು ಅರ್ಜಿ ತಿರಸ್ಕೃತವಾಗಿ ಸಾರ್ವಜನಿಕರ ಮಾತಿಗೆ ಗ್ರಾಸವಾಗಿದೆ ಎಂದ ಅವರು ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದೆಂಬ ಭಾವನೆಯಿದ್ದರೆ ಅದು ಕಷ್ಟಸಾಧ್ಯ. ಕಾನೂನು ಎಲ್ಲರಿಗೂ ಒಂದೇ. ಈಗಾಗಲೇ 573 ಎಕರೆ ಕಬಳಿಕೆ ಮಾಡಿರುವುದು ತನಿಖೆಯಿಂದ ಧೃಢಪಟ್ಟಿದ್ದು, ಸುಮಾರು ನೂರರಿಂದ ನೂರೈವತ್ತು ಮಂದಿ ಜೈಲಿಗೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಪಟ್ಟಣದ ಅಭಿವೃದ್ಧಿಗೆ ಎರಡು ಕೋಟಿ 70 ಲಕ್ಷ ರುಗಳನ್ನು ನಗರಾಭಿವೃದ್ಧಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈಗಾಗಲೇ ಅನುಮತಿ ಸಿಕ್ಕಿತ್ತು ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ ಎಂದು ತಿಳಿಸಿದ ಅವರು ಒಳಚರಂಡಿ ವ್ಯವಸ್ಥೆಗೆ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು1.5 ಎಕರೆ ಜಮೀನು ಕೇಳಿದ್ದು, ನಾವು ಈಗಾಗಲೇ ಮೂರು ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ ಎಂದ ಅವರು ಮಡೇನಹಳ್ಳಿ ಗ್ರಾಮಕ್ಕೆ ಹೊಸ ಆಸ್ಪತ್ರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ ರೈತರು ಬೆಳೆದಿರುವ ಬೆಳೆಗಳು ನಾಶವಾಗಿದ್ದು, ಬೆಲೆ ಪರಿಹಾರಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ. ಅತಿಯಾದ ಮಳೆಯು ಬಿದ್ದ ಕಾರಣ ತಾಲೂಕಿನ ಮುಖ್ಯ ರಸ್ತೆಗಳು ಹಾಳಾಗಿದ್ದು ಇದನ್ನು ಸರಿಪಡಿಸಲು ರಾಜ್ಯ ಸರ್ಕಾರ ಐವತ್ತು ಕೋಟಿ ಹಣ ನೀಡಿದರೂ ಸಹ ಅಭಿವೃದ್ಧಿ ಸಾಧ್ಯವಿಲ್ಲ ಎಂದು ತಿಳಿಸಿದರು.
ಕಳೆದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಪಟ್ಟಣ ಪಂಚಾಯಿತಿಯ ಹೊರ ಗುತ್ತಿಗೆದಾರರನ್ನು ಖಾಯಂ ಗೊಳಿಸಿರುವುದನ್ನು ಅಭಿನಂದಿಸಿ ಮಾತನಾಡುತ್ತಾ ಎಲ್ಲಾ ನೌಕರರಂತೆ ತಮಗೂ ಸರ್ಕಾರದ ಸೌಲಭ್ಯಗಳನ್ನು ನೀಡಲಿದ್ದು, ಅದನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದ ಅವರು ತಾಲೂಕಿನ ಜಿ.ಹೊಸಹಳ್ಳಿ ಕ್ರಾಸ್ ಬಳಿ ಎರಡು ಎಕರೆ ಭೂಮಿಯನ್ನು ಗುರ್ತಿಸಿದ್ದು ನಿವೇಶನವನ್ನು ನೀಡುವ ಜೊತೆಗೆ ವಸತಿಯನ್ನು ಕಲ್ಪಿಸಲು 7.5 ಲಕ್ಷ ಅನುದಾನವನ್ನು ಸರ್ಕಾರವು ನೀಡುತ್ತಾ ಇದ್ದು, ಈ ಎಲ್ಲವೂ ಜಾರಿಗೆ ಬರಬೇಕೆಂದರೆ ಪಟ್ಟಣ ಪಂಚಾಯಿತಿಯ ನಡವಳಿ ಅತಿಮುಖ್ಯ. ಹಾಗಾಗಿ ಸಭೆಯನ್ನು ಶೀಘ್ರದಲ್ಲೇ ಕರೆದು ಕಾಮಗಾರಿಗಳಿಗೆ ಸಭೆಯ ಅನುಮತಿಯನ್ನು ಪಡೆಯುವಂತೆ ಸೂಚಿಸಿದರು.
ಮುಖ್ಯಾಧಿಕಾರಿ ಮಂಜುಳದೇವಿ ಮಾತನಾಡಿ ಪಟ್ಟಣ ಪಂಚಾಯಿತಿಯ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಮಾಡಿದ್ದು, ಈಗಾಗಲೇ ಪಟ್ಟಣ ಪಂಚಾಯಿತಿಯು ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸಿಲಾಗಿದೆ,
ಪ್ರತಿ ವರ್ಷವೂ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡು ಕಾರ್ಮಿಕರ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ ಅವರು ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಕಾರ್ಡ್ ನ ಅವಕಾಶವು ಇದ್ದು ಅದಕ್ಕೆ ಅಗತ್ಯವಿರುವ ದಾಖಲೆಗಳನ್ನು ಪಡೆಯಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಹಾಲಕ್ಷ್ಮೀ ಲೋಕೇಶ್ ಬಾಬು, ಪ.ಪಂ ಸದಸ್ಯರಾದ ಮೋಹನ್, ಶಿವಕುಮಾರ್, ರೇಣುಕಾ ಪ್ರಸಾದ್, ಶ್ವೇತಾ, ಮಮತಾ, ಕುಮಾರ್, ಕೃಷ್ಣಮೂರ್ತಿ, ಶಶಿಕುಮಾರ್, ಶೌಕತ್, ಪ್ರಕಾಶ್, ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.