ತುಮಕೂರು
ನಗರದ ಕುಣಿಗಲ್ ರಸ್ತೆಯಲ್ಲಿ ಗುಂಡಿ ಬಿದ್ದು ತೀವ್ರ ಹದಗೆಟ್ಟು ವಾಹನಗಳು ಸಂಚರಿಸಲು ಹರಸಾಹಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಮನಗಂಡಿರುವ ಶಾಸಕ ಜ್ಯೋತಿಗಣೇಶ್ ಅವರು ಈ ರಸ್ತೆ ದುರಸ್ಥಿ ಕಾರ್ಯಕ್ಕೆ ಚಾಲನೆ ನೀಡಿದರು.
ನಗರದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮುಂಭಾಗ ಕುಣಿಗಲ್ ರಸ್ತೆಯ ದುರಸ್ಥಿ ಮತ್ತು ಅಭಿವೃದ್ಧಿ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಕೆಶಿಪ್ ಮತ್ತು ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ವಿಭಾಗದಿಂದ ಶಾಸಕರ ನಿಧಿಗೆ ಮುಖ್ಯಮಂತ್ರಿ 12 ಕೋಟಿ ರೂ. ನೀಡಿದ್ದು, ಈ ಪೈಕಿ ಎರಡೂವರೆ ಕೋಟಿ ರೂ. ಹಣವನ್ನು ಕುಣಿಗಲ್ ರಸ್ತೆಯ ನಾಲ್ಕು ಜಂಕ್ಷನ್‍ಗಳಲ್ಲಿ ಕಾಂಕ್ರೀಟ್ ಹಾಕಲು ನೀಡಲಾಗಿದೆ ಎಂದರು.
ಕುಣಿಗಲ್ ರಸ್ತೆಯ ಎಸ್‍ಎಸ್‍ಐ ಕಾಲೇಜು ಮುಂಭಾಗ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಂಭಾಗ, ಕೃಷ್ಣ ಬೇಕರಿ ಮುಂಭಾಗ ಹಾಗೂ ಹೇಮಾವತಿ ಕಚೇರಿ ಮುಂಭಾಗದ ಜಂಕ್ಷನ್‍ಗಳು ರಸ್ತೆ ತುಂಬಾ ಹಾಳಾಗಿದೆ. ಇದರಿಂದಾಗಿ ನಾಗರಿಕರು ಸುಗಮವಾಗಿ ಸಂಚರಿಸಲಾಗದೆ ತೀವ್ರ ಪ್ರಯಾಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ದುರಸ್ಥಿಗೊಳಿಸುವಂತೆ ಪ್ರತಿಭಟನೆಗಳು ಸಹ ನಡೆದಿವೆ ಎಂದ ಅವರು, ಈ ಕುಣಿಗಲ್ ರಸ್ತೆ ಪ್ರಸ್ತುತ ಜನಸಂಚಾರ, ವಾಹನಗಳ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದ್ದು, ಅಲ್ಲಲ್ಲಿ ಗುಂಡಿ ಗುದ್ದರಗಳು ಬಿದ್ದಿವೆ. ಇದನ್ನು ಮನಗಂಡು ಮೊದಲ ಹಂತವಾಗಿ ನನಗೆ ಬಂದಿರುವ ಅನುದಾನದ ಪೈಕಿ ಎರಡೂವರೆ ಕೋಟಿ ರೂ.ಗಳನ್ನು ಈ ಜಂಕ್ಷನ್‍ಗಳಲ್ಲಿ ಕಾಂಕ್ರೀಟ್ ಹಾಕಲು ನೀಡಿದ್ದೇನೆ ಎಂದರು.
ಕೆಶಿಪ್‍ನಿಂದ ನಿರ್ಮಾಣವಾಗಿರುವ ಈ ರಸ್ತೆ ಸದ್ಯ ತುಂಬಾ ಹಾಳಾಗಿದೆ. ವಾಹನ ಸವಾರರು ಸುಗಮವಾಗಿ ಸಂಚರಿಸಲಾಗದೆ ಪ್ರತಿನಿತ್ಯವೂ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹಾಗಾಗಿ ವಾಲ್ಮೀಕಿ ವೃತ್ತದಿಂದ ಕಾಲ್ಟ್ಯಾಕ್ಸ್ ವೃತ್ತದವರೆಗೆ ಈ ರಸ್ತೆ ಡಾಂಬರೀಕರಣ ಮಾಡಬೇಕಾಗಿದೆ. ಹಾಗಾಗಿ ಇನ್ನು ಐದಾರು ಕೋಟಿ ಹಣದ ಅವಶ್ಯಕತೆ ಇದೆ. ಈ ಬಗ್ಗೆಯೂ ಚಿಂತನೆ ನಡೆಸಿದ್ದು, ಬೇರೆ ಯಾವುದಾದರೂ ಯೋಜನೆಯಿಂದ ಇದಕ್ಕೆ ಅಗತ್ಯ ಇರುವ ಹಣವನ್ನು ಒದಗಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ಹಾಗೆಯೇ ಇಸ್ರಾ ಶಾದಿಮಹಲ್ ರಸ್ತೆಗೂ ಸಹ ಅಗತ್ಯ ಇರುವ ಆರು ಮುಕ್ಕಾಲು ಕೋಟಿ ರೂ. ಹಣ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಈ ಕಾಮಗಾರಿಗಳು ಆರಂಭವಾಗಿ ಪೂರ್ಣಗೊಳ್ಳುವವರೆಗೂ ನಗರದ ಜನರು ತಾಳ್ಮೆಯಿಂದ ವರ್ತಿಸಬೇಕು. ಕಾಮಗಾರಿ ಮಾಡುವವರೊಂದಿಗೆ ತಗಾದೆ ತೆಗೆಯದೆ ಸಹಕರಿಸುತ್ತಾ ಕಾಮಗಾರಿ ಗುಣಮಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹದಗೆಟ್ಟಿರುವ ಕುಣಿಗಲ್ ರಸ್ತೆಯನ್ನು ಸರಿಪಡಿಸಿ ಪಾದಚಾರಿ, ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಸೇರಿದಂತೆ ಸಾರ್ವಜನಿಕರು, ಪಾದಚಾರಿಗಳು ಸುರಕ್ಷತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ಶಾಸಕರು ಕುಣಿಗಲ್ ರಸ್ತೆ ಹದಗೆಟ್ಟಿರುವ ಬಗ್ಗೆ ಅರಿತು ಸದ್ಯ ಎರಡೂವರೆ ಕೋಟಿ ಹಣ ನೀಡಿದ್ದಾರೆ. ಇನ್ನು ಹೆಚ್ಚಿನ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ತುಂಬಾ ಸಂತೋಷಕರ ವಿಚಾರ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಉಪಮೇಯರ್ ನರಸಿಂಹಮೂರ್ತಿ, ಮಾಜಿ ಮೇಯರ್ ಹಾಗೂ ಸದಸ್ಯರಾದ ಫರೀದಾಬೇಗಂ, ಮಂಜುನಾಥ್, ಧರಣೇಂದ್ರಕುಮಾರ್, ಶಕೀಲ್, ಆಯುಕ್ತೆ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.