ತುಮಕೂರು
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ದಾರಿ ಬದಲಾಗುವ ಸಾಧ್ಯತೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಭಾರತ್ ಜೋಡೋ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿಯೇ ಹೆಚ್ಚಿನ ಅವಧಿಯಲ್ಲಿ ರಾಹುಲ್ ಗಾಂಧಿ ಸಂಚರಿಸಲಿದ್ದಾರೆ, ಇದನ್ನು ಯಶಸ್ವಿಗೊಳಿಸಬೇಕಾದ ಹೊಣೆಗಾರಿಕೆ ಜಿಲ್ಲೆಯ ನಾಯಕರ ಮೇಲಿದೆ ಎಂದರು.
ಭಾರತ್ ಜೋಡೋ ಯಾತ್ರೆ ಮೂಲ ಆದಿಚುಂಚನಗಿರಿ, ತುರುವೇಕೆರೆ, ಚಿಕ್ಕನಾಯಕಹಳ್ಳಿ, ಹುಳಿಯಾರು ಮೂಲಕ ಚಿತ್ರದುರ್ಗ ಜಿಲ್ಲೆಗೆ ಹೋಗಬೇಕಿತ್ತದರು, ಆ ದಾರಿಯಲ್ಲಿ ಗ್ರಾಮಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಪಿಸಿಸಿ ಅಧ್ಯಕ್ಷರು ಮಾರ್ಗ ಬದಲಾವಣೆ ಮಾಡಿದ್ದರು, ಈಗ ಮೂಲ ಮಾರ್ಗದಲ್ಲಿಯೇ ಯಾತ್ರೆ ಸಾಗಬೇಕು ಎಂದು ರಾಹುಲ್ ಗಾಂಧಿ ಕಚೇರಿಯಿಂದ ಪತ್ರ ಬಂದಿದ್ದು, ಮೂಲ ಮಾರ್ಗದ ಬಗ್ಗೆ ತಾಂತ್ರಿಕ ತಂಡ ಪರಿಶೀಲನೆ ನಡೆಸುತ್ತಿದೆ ಎಂದರು.
ಮಾರ್ಗ ಯಾವುದೇ ಆದರೂ ಅಕ್ಟೋಬರ್ 8ರಂದು ಜಿಲ್ಲೆಯ ಟಿಬಿ ಕ್ರಾಸ್ನಲ್ಲಿ ಪ್ರಾರಂಭವಾಗಲಿರುವ ಯಾತ್ರೆಗೆ ಕನಿಷ್ಠ 5 ಸಾವಿರ ಜನರು ಅವರೊಂದಿಗೆ ಹೆಜ್ಜೆ ಹಾಕಬೇಕಿದ್ದು, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಆದಿಚುಂಚನಗಿರಿ ಅಥವಾ ತುರುವೇಕೆರೆಯಲ್ಲಿ ವಾಸ್ತವ್ಯ ಹೂಡಬೇಕೆಂದು ಡಾ.ಜಿ.ಪರಮೇಶ್ವರ್ ಅವರು ಸೂಚಿಸಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವೆ ಉಮಾಶ್ರೀ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ವೆಂಕಟರಮಣಪ್ಪ, ಶಾಸಕರಾದ ರಂಗನಾಥ್, ಡಿಸಿಸಿ ಅಧ್ಯಕ್ಷ ರಾಮಕೃಷ್ಣ ಮುಖಂಡರಾದ ಪ್ರಸನ್ನಕುಮಾರ್, ಹೊನ್ನಗಿರಿಗೌಡ ಮಾತನಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕರಾದ ಬಿ.ಬಿ.ರಾಮಸ್ವಾಮಿಗೌಡ, ಆರ್.ನಾರಾಯಣ್, ಷಡಕ್ಷರಿ, ರಫೀಕ್ ಅಹಮದ್, ಮುಖಂಡರಾದಬೆಮಲ್ ಕಾಂತರಾಜು, ಪಾವಗಡ ವೆಂಕಟೇಶ್, ಗುರುಪ್ರಸಾದ್, ಇತರರಿದ್ದರು
ರಾಯಸಂದ್ರ ರವಿಕುಮಾರ್, ವೈ.ಸಿ.ಸಿದ್ದರಾಮಯ್ಯ, ಯಲಚವಾಡಿ ನಾಗರಾಜ್, ಅತೀಕ್ ಅಹಮದ್, ಇಕ್ಬಾಲ್ ಅಹಮದ್, ಹೆಚ್.ಸಿ.ಹನುಮಂತಯ್ಯ, ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ, ಡಿ.ಟಿ.ವೆಂಕಟೇಶ್, ಲೊಕೇಶ್ವರ್, ಶಶಿ ಹುಲಿಕುಂಟೆಮಠ್ ಇತರರಿದ್ದರು.