ತುಮಕೂರು


ಯುವಜನರು, ಒಳ್ಳೆಯದು, ಕೆಟ್ಟದ್ದರ ಬಗ್ಗೆ ಅರಿವು ಮೂಡಿಸುತ್ತಾ, ಉತ್ತಮ ಪ್ರಜೆಗಳನ್ನು ರೂಪಿಸುವ ಮೂಲಕ ದೇಶದ ದಿಕ್ಸೂಚಿ ಬದಲಿಸುವ ಶಕ್ತಿ ಇರುವುದು ಶಿಕ್ಷಕ ವೃಂದಕ್ಕೆ ಮಾತ್ರ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಬಾಲಭವನದಲ್ಲಿ ಕರುನಾಡ ವಿಜಯಸೇನೆ ಆಯೋಜಿಸಿದ್ದ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾವಾರಧಿ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ತಿದ್ದಿ, ತೀಡುವ, ಅವರ ಸರಿ,ತಪ್ಪುಗಳನ್ನು ಗುರುತಿಸಿ, ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ವದೆಂದರು.
ಶಿಕ್ಷಕರಾಗಿದ್ದುಕೊಂಡು ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ,ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಉಪರಾಷ್ಟ್ರತಿಯಾಗಿದ್ದ ಡಾ.ರಾಧಾಕೃಷ್ಣನ್,ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಬಾಯಿ ಪುಲೆ ಇವರೆಲ್ಲರೂ ಶಿಕ್ಷಣ ಕ್ಷೇತ್ರದ ಆದರ್ಶ ವ್ಯಕ್ತಿಗಳು.ಅವರ ಸಾಲಿಗೆ ನೀವೆಲ್ಲರೂ ಸೇರುವಂತಹ ಉತ್ತಮ ಅಂಶಗಳನ್ನು ನಿಮ್ಮ ಭೋಧನಾ ಕ್ರಮದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ ಶಾಸಕ ಜೋತಿಗಣೇಶ್,ವಿದ್ಯೆಯ ಜೊತೆಗೆ ದೇಶಪ್ರೇಮವನ್ನು ಮಕ್ಕಳಿಗೆ ಕಲಿಸುವಂತೆ ಮನವಿ ಮಾಡಿದರು.
ಕನ್ನಡ ನಾಡು,ನುಡಿ ವಿಚಾರದಲ್ಲಿ ಯಾವುದೇ ತೊಂದರೆಯಾದಾಗಲು ನಾಡಿನ ಜನರೊಂದಿಗೆ ನಿಲ್ಲುವವರು ಕನ್ನಡ ಸಂಘಟನೆಗಳು,ಹಾಗಾಗಿ ಇಂದು ನಾಡಿಗೆ ಕನ್ನಡಪರ ಸಂಘಟನೆಗಳ ಅವಶ್ಯಕತೆ ಇದೆ.ಕನ್ನಡಿಗರ ಮೇಲೆ ನಡೆಯುವ ದೌರ್ಜನ್ಯ,ದಬ್ಬಾಳಿಕೆ ವಿರುದ್ದ ದ್ವನಿ ಎತ್ತುವ ವೇದಿಕೆ ಇದಾಗಿದ್ದು,ಇನ್ನೂ ಹೆಚ್ಚಿನ ಯಶಸ್ಸುಗಳಿಸಲೇಂದು ಜಿ.ಬಿ.ಜೋತಿಗಣೇಶ್ ಹಾರೈಸಿದರು.
ತುಮಕೂರು ವಿವಿ ಕುಲಸಚಿವ ಡಾ.ಕೆ.ಶಿವಚಿತ್ತಪ್ಪ ಮಾತನಾಡಿ,ಒಂದು ಗುರಿಯನ್ನು ತಲುಪಬೇಕಾದರೆ, ಅದು ಗುರುಗಳ ಮಾರ್ಗದರ್ಶನದಿಂದ ಮಾತ್ರ ಸಾಧ್ಯ.ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಕಡಿಮೆ ಇದ್ದರೂ ಶಿಷ್ಯವೃಂದದಿಂದ ದೊರೆಯುವ ಗೌರವ ಮಾತ್ರ ದೊಡ್ಡದು.ಜ್ಞಾನಕ್ಕಿಂತ ಮೀಗಿಲಾದುದ್ದು ಯಾವುದೂ ಇಲ್ಲ. ಅಂತಹ ಜ್ಞಾನವನ್ನು ನೀಡುವ ಶಿಕ್ಷಕರನ್ನು ಗುರುತಿಸಿ ಅಭಿನಂದಿಸುತ್ತಿರುವುದು ತುಂಬ ಸಂತೋಷ ಪಡುವ ವಿಚಾರ ಎಂದರು.
ನಗರಪಾಲಿಕೆಯ ವಿರೋಧಪಕ್ಷದ ನಾಯಕ ಕೆ.ಕುಮಾರ್ ಮಾತನಾಡಿ,ಕುಟುಂಬಸ್ತರನ್ನು ಬಿಟ್ಟು ಒಬ್ಬ ವ್ಯಕ್ತಿಯ ಒಳ್ಳೆಯ ಗುಣಗಳನ್ನು ಗುಣಗಾನ ಮಾಡುವವರು ಆತನ ಗುರುಗಳು ಮಾತ್ರ. ನನ್ನ ವಿದ್ಯಾರ್ಥಿ ಜೀವನದಲ್ಲಿ ದೊರೆತ ಶಿಕ್ಷಕರು ನನ್ನ ಇಂದಿಗೆ ಬೆಳೆಯಲ್ಲಿ ನನಗೆ ಪಾಠ ಮಾಡಿದ ಶಿಕ್ಷಕರ ಪಾತ್ರವಿದೆ.ಅವರ ಗೌರವಕ್ಕೆ ಚ್ಯುತಿ ಬರದಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಮಾತನಾಡಿ, ಸಮಾಜವನ್ನು ತಿದ್ದಿ,ತೀಡಿ ಸರಿದಾರಿಗೆ ತರುವ ಶಿಕ್ಷಕರನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ವಿದ್ಯಾವಾರಿಧಿ ಪ್ರಶಸ್ತಿಯನ್ನು ನೀಡಲು ಮುಂದಾಗಿದ್ದು,ಇದುವರೆಗು 750 ಶಿಕ್ಷಕರನ್ನು ಸನ್ಮಾನಿಸಲಾಗಿದೆ.ತುಮಕೂರು ಜಿಲ್ಲೆಯಲ್ಲಿಯೂ ಇಂದು 135 ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಗುರುವಂದನೆ ಸಲ್ಲಿಸಲಾಗುತ್ತಿದೆ.ಶಿಕ್ಷಣದ ಜೊತೆಗೆ ನಾಡು, ನುಡಿ, ನೆಲ,ಜಲದ ವಿಚಾರದಲ್ಲಿ, ರೈತರು, ಬಡವರು ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಪರವಾಗಿ ಕರುನಾಡ ಸೇನೆ ದ್ವನಿ ಎತ್ತಿದೆ ಎಂದರು.
ಶಿಕ್ಷಣ ಇಂದು ವ್ಯಾಪಾರದ ವಸ್ತುವಾಗಿದೆ.ಬಂಡವಾಳಗಾರರು ಲಾಭದ ಆಸೆಯಿಂದ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ತೆರೆದು, ಮಕ್ಕಳಿಂದ ಟೂಷನ್ ಫೀ,ಬಟ್ಟೆ, ಪುಸ್ತಕದ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ 30 ರೂಗಳಿಗೆ ಸಿಗುವ ನೋಟ್ ಪುಸ್ತಕಕ್ಕೆ 200 ಬಿಲ್ ಮಾಡಿ, ಪೋಷಕರನ್ನು ಶೋಷಿಸಲಾಗುತ್ತಿದೆ. ಬಡವರಿಗೆ ಒಂದು ರೀತಿಯ ಶಿಕ್ಷಣ, ಉಳ್ಳವರಿಗೆ ಮತ್ತೊಂದು ರೀತಿಯ ಶಿಕ್ಷಣ ಕೊನೆಗಾಣಬೇಕು.ಇಲ್ಲದಿದ್ದರೆ ಅಭಿವೃದ್ದಿ ಎಂಬುದು ಮರೀಚಿಕೆಯಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರ, ಅದರಲ್ಲಿಯೂ ಸರಕಾರಿ ಶಾಲೆಗಳ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.ಶಿಕ್ಷಣದ ಜೊತೆಗೆ, ಪ್ರಚಲಿತ ಸಮಸ್ಯೆಗಳನ್ನು ಎದುರಿಸುವ ಚಾಕುಚಕ್ಯತೆ ಹಾಗೂ ಆತ್ಮಸ್ಥೈಯವನ್ನು ಮಕ್ಕಳಿಗೆ ತುಂಬುವಂತೆ ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಮನವಿ ಮಾಡಿದರು.
ವೇದಿಕೆಯಲ್ಲಿ ಕರುನಾಡ ವಿಜಯಸೇನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ಮುಖ್ಯ ಸಲಹೆಗಾರ ಡಾ.ಸುದೀಪ್‍ಕುಮಾರ್, ರಾಜ್ಯ ಸಮಿತಿ ಸದಸ್ಯ ಸಂದೀಪ್, ಶಿವಮೊಗ್ಗ ಜಿಲ್ಲಾಧ್ಯಕ್ಷ ತ್ಯಾಗರಾಜು, ಮಹಿಳಾ ಘಟಕದ ಅಧ್ಯಕ್ಷ ಯಾಸ್ಮೀನ್ ತಾಜ್,ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಅರುಣ್‍ಕುಮಾರ್, ಗೌರವಾಧ್ಯಕ್ಷ ಬಿ.ಬಿ.ಮಹದೇವಯ್ಯ,ಪ್ರಧಾನ ಕಾರ್ಯದರ್ಶಿ ಕೆ.ಗಂಗಾಧರ್, ತಾಲೂಉ ಅಧ್ಯಕ್ಷರುಗಳಾದ ವಿನಯ್, ರಮೇಶ್ ಉಪಸ್ಥಿತರಿದ್ದರು.

(Visited 1 times, 1 visits today)