ತುಮಕೂರು


ಅನುದಾನಿತ ಶಾಲಾ, ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಒಂದೆಡೆ ಆಡಳಿತ ಮಂಡಳಿ, ಮತ್ತೊಂದೆಡೆ ಆಡಳಿತಶಾಹಿಯ ಕಿರುಕುಳದ ನಡುವೆ ಬೆಂದು ಹೋಗಿದ್ದಾರೆ. ಶೀಘ್ರದಲ್ಲಿಯೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸರಕಾರದ ಮುಖ್ಯಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ನಗರದ ಮುರುಘಾಮಠದ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ನೌಕರರ ಸಂಘ(ರಿ) ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಅಧಿಕಾರಿಗಳು ಅನುದಾನಿತ ಶಾಲಾ,ಕಾಲೇಜುಗಳಿಗೆ ವಿಧಿಸುವ ಹಲವು ಷರತ್ತುಗಳನ್ನು ಪೂರೈಸಲು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಿದ್ದವಿಲ್ಲ. ಷರತ್ತುಗಳನ್ನು ಪೂರೈಸದಿದ್ದರೆ ವೇತನ, ತುಟ್ಟಿಭತ್ಯೆ ಇಲ್ಲ. ಹೀಗಾಗಿ ಸರಕಾರ ಮತ್ತು ಆಡಳಿತ ಮಂಡಳಿಯ ಹಗ್ಗ ಜಗ್ಗಾಟದ ನಡುವೆ ಸಿಬ್ಬಂದಿಗಳು ಬೆಂದು ಹೋಗಿದ್ದಾರೆ ಎಂದರು.
ಸರಕಾರಕ್ಕೆ ಪೂರಕವಾಗಿ ಸ್ವಾತಂತ್ರಪೂರ್ವದಲ್ಲಿ ಮತ್ತು ನಂತರದಲ್ಲಿ ಮಠ, ಮಾನ್ಯಗಳು, ಸಂಘ, ಸಂಸ್ಥೆಗಳು ಶಾಲೆಗಳನ್ನು ತೆರೆದು ಮಕ್ಕಳಿಗೆ ಶಿಕ್ಷಣ ನೀಡಿದ್ದರ ಫಲವಾಗಿ ಇಂದು ಕರ್ನಾಟಕ ಜ್ಞಾನದ ನಾಡು ಎಂದು ಕರೆಯಿಸಿಕೊಳ್ಳುತ್ತಿದೆ.ಆದರೆ ಸರಕಾರ ಇಂದು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ಮೂಲಕ ಹಂತ ಹಂತವಾಗಿ ಮುಚ್ಚುವ ಪ್ರಕ್ರಿಯೆಯಲ್ಲಿದೆ.ಇದಕ್ಕೆ ನಾವುಗಳು ಎಂದಿಗೂ ಅವಕಾಶ ನೀಡುವುದಿಲ್ಲ.ಅನುದಾನ ನೀಡುವ ವಿಭಾಗ ಸಂವೃದ್ದ ಹುಲ್ಲುಗಾವಲು ಎಂದಿಕೊಂಡಿರುವ ಅಧಿಕಾರಶಾಹಿಗಳಿಗೆ ಸರಿಯಾದ ಚುರುಕು ಮುಟ್ಟಿಸಿ ನಿಮ್ಮ ಕೆಲಸ ಮಾಡಿಕೊಡಲು ಸಿದ್ದ ಎಂದು ವೈ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ,ಶಿಕ್ಷಕರ ಸಮಸ್ಯೆ, ಅದರಲ್ಲಿಯೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ವೇತನ ಸಮಸ್ಯೆ ಬಗೆಹರಿಸುವುದು ಇಂದು ದೊಡ್ಡ ತಲೆನೋವಾಗಿದೆ.ಶಿಕ್ಷಣ ಕ್ಷೇತ್ರ ಇದೊಂದು ದೊಡ್ಡ ಸೇವಾ ವಲಯ. ಶೇ70ರಷ್ಟು ಖಾಸಗೀಕರಣವಾಗಿದೆ, ಅಂದರೆ ಖಾಸಗಿ ಶಾಲೆಗಳಲ್ಲಿ ಅತಿ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಸರಕಾರಿ ಮತ್ತು ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರ ವೇತನ ಮತ್ತು ಮತ್ತಿತರರ ಸೌಲಭ್ಯಗಳಲ್ಲಿ ತಾರತಮ್ಯವಿದೆ.ಯುಜಿಸಿ ಸ್ಕೇಲ್ ಸಿಗಬೇಕಿರುವುದು ಪದವಿ, ಸ್ನಾತಕೋತ್ತರ ಪದವಿ ಶಿಕ್ಷಕರಿಗಲ್ಲ.1ರಿಂದ 12ನೇ ತರಗತಿಯವರೆಗೆ ಪಾಠ ಮಾಡುವ ಶಿಕ್ಷಕರಿಗೆ ಇದು ಲಭ್ಯವಾಗಬೇಕು.ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ತುಮಕೂರು ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ನೌಕರರ ಸಂಘ(ರಿ)ದ ಅಧ್ಯಕ್ಷ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ,ಸರಕಾರ 2015ರವರೆಗೆ ಮಾತ್ರ ಬೋಧಕ,ಬೋಧಕೇತರ ಸಿಬ್ಬಂದಿಯನ್ನು ತುಂಬಲು ಸರಕಾರ ಅನುಮತಿ ನೀಡಿದೆ. ಆದರೆ ಈಗಾಗಲೇ ಶೇ60ರಷ್ಟು ಹುದ್ದೆಗಳು ಖಾಲಿ ಇವೆ.ಮುಂದಿನ ಮೂರು ವರ್ಷ ಕಳೆದರೆ ಶೇ90 ಹುದ್ದೆಗಳನ್ನು ತುಂಬಬೇಕಾಗುತ್ತದೆ. ಯೋಜನೆಗಳನ್ನು ವಿಸ್ತರಿಸಬೇಕೆಂದು ಮನವಿಯನ್ನು ಸರಕಾರದ ಮುಖ್ಯ ಸಚೇತಕರಿಗೆ ಸಲ್ಲಿಸಿದರು.
ಸಮಾರಂಭ ಕುರಿತು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ.ಸಿದ್ದಲಿಂಗಪ್ಪ, ಸರಕಾರಿ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಮಹಾಲಿಂಗೇಶ್ ಮಾತನಾಡಿದರು. ವೇದಿಕೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ್,ಜಿಲ್ಲಾ ಪ್ರಾಚಾರ್ಯರರ ಸಂಘದ ಅಧ್ಯಕ್ಷ ಲಿಂಗದೇವರು,ದೈಹಿಕ ಶಿಕ್ಷಕ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಆರ್.ಬಸವರಾಜು, ವೈ.ಎ.ಎನ್.ಅಭಿಮಾನಿ ಬಳಗದ ಡಾ.ಟಿ.ಶ್ರೀನಿವಾಸರೆಡ್ಡಿ,ತುಮಕೂರು ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘದ ಪದಾಧಿಕಾರಿಗಳಾದ ಮುದ್ದಯ್ಯ, ಕೃಷ್ಣಮೂರ್ತಿ, ಲಕ್ಷ್ಮಿಕಾಂತ್,ತಿಪ್ಪೇಶ್,ಎ,ಆರ್, ಚಂದ್ರಶೇಖರ್ ಆರಾಧ್ಯ. ಹೆಚ್.ವಿ, ಗಂಗಾಧರಮೂರ್ತಿ, ಹೆಚ್.ಆರ್,ಶ್ರೀಮತಿ ವಿಮಲಾ.ಬಿ.ಎಸ್, ಶ್ರೀಮತಿ ಸುನಿತಾ ಸೇರಿದಂತೆ ಎಲ್ಲಾ ನಿರ್ದೇಶಕರುಗಳು ಉಸಪ್ಥಿತರಿದ್ದರು.

(Visited 1 times, 1 visits today)