ಮದುಗಿರಿ
ಪಟ್ಟಣದಲ್ಲಿ ಮಂಜೂರಾಗಿದ್ದ ಪಾಲಿಟೆಕ್ನಿಕ್ ಕಾಲೇಜನ್ನು ಬೇರೆಡೆಗೆ ಸ್ಥಳಾಂತರಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಮುಖಂಡ ವೆಂಕಟಾಪುರ ಗೋವಿಂದರಾಜು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಮಧುಗಿರಿಗೆ 2016-17 ನೇ ಸಾಲಿನಲ್ಲಿ ಅಂದಿನ ಸರ್ಕಾರ ಮಂಜೂರು ಮಾಡಿತ್ತು. ನಂತರದ ದಿನಗಳಲ್ಲಿ ಆಯುಕ್ತರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವರ ಕೋರಿಕೆಯಂತೆ ಮತ್ತು ಮಧುಗಿರಿ ಶಾಸಕರ ಆದೇಶದಂತೆ ಮಧುಗಿರಿಯ ಅಂದಿನ ತಹಶೀಲ್ದಾರ್ ರವರು ಪಟ್ಟಣದ ಗುರುವಡೇರಹಳ್ಳಿ ಗ್ರಾಮದ ಸರ್ವೇ ನಂಬರ್ 26 ರಲ್ಲಿ 4 ಎಕರೆ ಜಮೀನನ್ನು ಮಂಜೂರು ಮಾಡಿ ಆದೇಶಿಸಿ, ಮಂಜೂರಾತಿ ಪತ್ರವನ್ನು ಆಯುಕ್ತರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿ ಕೊಟ್ಟಿರುತ್ತಾರೆ ಆದರೆ ಇತ್ತೀಚೆಗೆ ಕೆಲವೊಂದು ಕಾಣದ ಕೈಗಳು ಮಧುಗಿರಿ ಪಟ್ಟಣದಲ್ಲಿ ಮಂಜೂರಾಗಿರುವ ಪಾಲಿಟೆಕ್ನಿಕ್ ಕಾಲೇಜನ್ನು ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದ ಬಳಿ ನಿರ್ಮಾಣ ಮಾಡಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಸಚಿವರ ಆಪ್ತರೊಬ್ಬರ ಮೂಲಕ ಮತ್ತೊಮ್ಮೆ ಭೂ ಮಂಜೂರಾತಿಗಾಗಿ ಆಯುಕ್ತರಿಂದ ಪತ್ರ ಬರೆಸಿದ್ದು, ಬೇಡತ್ತೂರು ಗ್ರಾಮದ ನಲ್ಲೇಕಾಮನಹಳ್ಳಿ ಸರ್ವೆ ನಂಬರ್ 81 ರ ಗೋಮಾಳದಲ್ಲಿ 5 ಎಕರೆ ಜಮೀನು ಮಂಜೂರು ಮಾಡಿಸಿರುತ್ತಾರೆ. ಈ ಗ್ರಾಮವು ತಾಲೂಕಿನ ಗಡಿ ಗ್ರಾಮವಾಗಿದ್ದು, ಪಟ್ಟಣದಿಂದ ಸುಮಾರು 25 ಕಿಮಿ ದೂರದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರತೀದಿನ ಓಡಾಡಲು ಬಹಳಷ್ಟು ತೊಂದರೆಯಾಗುತ್ತದೆ. ಆದ್ದರಿಂದ ಯಥಾ ಸ್ಥಿತಿ ಕಾಪಾಡಿಕೊಂಡು ಈ ಹಿಂದೆ ಪಟ್ಟಣದಲ್ಲಿ ಮಂಜುರಾಗಿರುವ 4 ಎಕರೆ ಜಮೀನಿನಲ್ಲಿಯೇ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.