ತುಮಕೂರು


ಅಕ್ಷರ ಕಲಿಕೆಯು ನಿಂತ ನೀರಾಗದೆ ಹರಿಯುವ ನೀರಿನಂತೆ ಮುಂದುವರೆಯುತ್ತಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಬಿ.ಗೀತಾ ಅಭಿಪ್ರಾಯಪಟ್ಟರು.
ಜಿಲ್ಲಾ ಕಾರಾಗೃಹ, ಲೋಕಶಿಕ್ಷಣ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕಾರಾಗೃಹದ ಅನಕ್ಷರಸ್ಥ ಹಾಗೂ ಅರೆ ಅಕ್ಷರಸ್ಥ ಬಂಧಿಗಳಿಗಾಗಿ ಅಕ್ಟೋಬರ್ 2ರಂದು ಹಮ್ಮಿಕೊಂಡಿದ್ದ 2ನೇ ಹಂತದ ಸಾಕ್ಷರತಾ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಮತ್ತು ಮನಃ ಪರಿವರ್ತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನವರಾತ್ರಿಯ ದೇವಿ ಸರಸ್ವತಿ ಪೂಜೆ ಸಂದರ್ಭದಲ್ಲಿ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶುಭ ಸೂಚಕವಾಗಿದೆ ಎಂದರಲ್ಲದೆ, ಯಾವುದೋ ವಿಷಮ ಗಳಿಗೆಯಲ್ಲಿ ಕಾರಾಗೃಹ ವಾಸಿಗಳಾಗಿರುವ ನೀವು ಗಾಂಧೀಜಿ ಅವರ ಅಹಿಂಸಾ ತತ್ವಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಲಕ್ಷ್ಮೀಜನಾರ್ಧನ್ ಮಾತನಾಡಿ, ಅಕ್ಷರ ಕಲಿಕೆಯು ಒಂದು ಆಂದೋಲನವಾಗಬೇಕು. 21ನೆ ಶತಮಾನದಲ್ಲಿಯೂ ಜನರು ಇನ್ನೂ ಸಹಿ ಮಾಡದೆ ಹೆಬ್ಬೆಟ್ಟು ಹಾಕುತ್ತಿರುವುದು ದುರಂತ. ಈ ನಿಟ್ಟಿನಲ್ಲಿ ಎಲ್ಲರೂ ಅಕ್ಷರ ಕಲಿಯಲು ಮುಂದಾಗಬೇಕೆಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧಕರು ಹಾಗೂ ಕಾರ್ಯದರ್ಶಿ ಡಾ: ಡಿ.ಎನ್. ಯೋಗೀಶ್ವರಪ್ಪ ಉಪನ್ಯಾಸ ನೀಡುತ್ತಾ, ಗಾಂಧೀಜಿ ಅವರ ಬಾಲ್ಯ, ವಿದ್ಯಾಭ್ಯಾಸ, ಜೀವನಶೈಲಿ, ದೇಶದ ಸ್ವಾತಂತ್ರ್ಯಕ್ಕೆ ಅವರು ಅನುಸರಿಸಿದ ಸನ್ಮಾರ್ಗಗಳ ಬಗ್ಗೆ ವಿವರವಾಗಿ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ಕಾರಾಗೃಹ ಬಂಧಿಗಳಲ್ಲಿ ಹಾಡುಗಾರರು, ಚಿತ್ರಕಲಾಕಾರರಿದ್ದು ಅವರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಉತ್ತಮ ವೇದಿಕೆಯನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕಿ ಎಂ.ಶಾಂತಮ್ಮ ಮಾತನಾಡಿ, ಕಾರಾಗೃಹ ಬಂಧಿಗಳನ್ನು ವಿದ್ಯಾವಂತರನ್ನಾಗಿ ಮಾಡಿ ಶಿಕ್ಷಣದ ಮಹತ್ವವನ್ನು ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಾರಾಗೃಹದಲ್ಲಿ ತಪ್ಪಿತಸ್ಥರನ್ನು ಬಂಧಿಗಳನ್ನಾಗಿಸಬಹುದು. ಕಾರಾಗೃಹ ಬಂಧಿಗಳು ತಮ್ಮ ತಪ್ಪಿಗೆ ಪಶ್ಚಾತ್ತಾಪಪಟ್ಟರೆ ಅದಕ್ಕಿಂತ ಪ್ರಾಯಶ್ಚಿತ್ತ ಮತ್ತೊಂದಿಲ್ಲ. ಆದಷ್ಟು ಬೇಗ ಬಿಡುಗಡೆ ಭಾಗ್ಯ ದೊರೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹದ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)