ತುಮಕೂರು
ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿಗೆ ಅನುದಾನಿತ ನೌಕರರ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಈ ಪಾದಯಾತ್ರೆ ಅ. 7 ರಂದು ನಗರದ ಸಿದ್ಧಗಂಗಾ ಮಠದಿಂದ ಆರಂಭವಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಹನುಮೇಶ್ ಆರ್. ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷ ಧರ್ಮೇಂದ್ರ ಪ್ರಸಾದ್ ಜೆ. ತಿಳಿಸಿದ್ದಾರೆ.
ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ ದಿನಾಂಕ:01-04-2006ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಹಾಗೂ ಮೊದಲೇ ನೇಮಕಗೊಂಡು ನಂತರ ಅನುದಾನಕ್ಕೊಳಪಟ್ಟು ವೇತನ ಪಡೆಯುತ್ತಿರುವ ನೌಕರರಿಗೆ ಯಾವುದೇ ವಿಧದ ಪಿಂಚಣಿ ಸೌಲಭ್ಯ (ಎನ್.ಪಿ.ಎಸ್‍ಅಥವಾ ಓ.ಪಿ.ಎಸ್) ಎರಡೂ ಇರುವುದಿಲ್ಲ. ಪಿಂಚಣಿ ಸೌಲಭ್ಯ ದೊರೆಯದೆ ಈಗಾಗಲೇ ಸುಮಾರು 3000ಕ್ಕೂ ಹೆಚ್ಚು ನೌಕರರು ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ. ಅನೇಕರು ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಮರಣ ಹೊಂದಿದ್ದಾರೆ, ಇವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು, ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪುನೀಡಿದ್ದರೂ ಸಹ ಸರ್ಕಾರ ಬೇಡಿಕೆ ಈಡೇರಿಸುತ್ತಿಲ್ಲ ಎಂದು ದೂರಿದ್ದಾರೆ.
ಇಡೀ ದೇಶದ ಲ್ಲಿಎಲ್ಲಿಯೂ ಇಲ್ಲದ, ಕೇವಲ ಕರ್ನಾಟಕದಲ್ಲಿ ಮಾತ್ರ ಈ ತಾರತಮ್ಯ ಇರುವುದು ಮತ್ತೊಂದು ದುರಂತ. ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಅನುದಾನಿತ ಸಂಸ್ಥೆಗಳ ನೌಕರರಿಗೆ ಪಿಂಚಣಿ ನೀಡುತ್ತಿವೆ.
ದಿನಾಂಕ:01-04-2006ಕ್ಕೂ ಮೊದಲು ವೇತನಾನುದಾನಕ್ಕೆ ಒಳಪಟ್ಟ ನೌಕರರಿಗೆ ಈಗಲೂ ಸರ್ಕಾರವೇ ಪಿಂಚಣಿ ನೀಡುತ್ತಿದೆ. ಆದರೆ ನಮ್ಮ ರಾಜ್ಯ ಸರ್ಕಾರದ ಈ ಅನ್ಯಾಯವನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಅನೇಕ ಹೋರಾಟಗಳನ್ನು ಮಾಡಿ ಗಮನ ಸೆಳೆಯಲಾಗಿದೆ. ಕಳೆದ ಸಪ್ಟೆಂಬರ್ 20 ರಂದು ಫ್ರೀಡಂ ಪಾರ್ಕ್‍ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದೇವೆ ಎಂದಿದ್ದಾರೆ.
ಆದರೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಹಾಗಾಗಿ ಸಂಘದ ತೀರ್ಮಾನದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಪಿಂಚಣಿ ವಂಚಿತ ನೌಕರರು ಅ. 7 ರಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠದಿಂದ ಬೆಂಗಳೂರಿನ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಪಾದಯಾತ್ರೆಯು ಅ. 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ನಂತರ ಫ್ರೀಡಂ ಪಾರ್ಕ್‍ನಲ್ಲಿಯೇ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲು ತೀರ್ಮಾನಿಸಿರುವುದಾಗಿ ಸಂಘದ ಉಪಾಧ್ಯಕ್ಷರಾದ ಪಿ.ಡಿ. ರವಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟಾಚಲ ತಿಳಿಸಿದ್ದಾರೆ.
ದಿನಾಂಕ: 01-04-2006 ನಂತರ ನೇಮಕಗೊಂಡ ಅನುದಾನಿತ ನೌಕರರಿಗೆ ಎನ್.ಪಿ.ಎಸ್. ಯೋಜನೆಯ ಆಡಳಿತ ಮಂಡಳಿಯ ವಂತಿಗೆಯನ್ನು ಸರ್ಕಾರವೇ ಭರಿಸತಕ್ಕದ್ದು. ಕಾಲ್ಪನಿಕ ವೇತನ ಜಾರಿಗೊಳಿಸುವುದು, ಅಂದರೆ ದಿನಾಂಕ: 01-04-2006 ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ನೌಕರರ ಅನುದಾನರಹಿತ ಅವಧಿ ಸೇವೆ ಪರಿಗಣಿಸಿ “ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ” ನೀಡುವುದು ಹಾಗೂ ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯ ಇಲ್ಲದೆ ಅನುದಾನಿತ ನೌಕರರಿಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಹೋರಾಟದ ಪಾದಯಾತ್ರೆಯಲ್ಲಿ ಪಿಂಚಣಿ ವಂಚಿತರಾಗಿರುವ ನಿವೃತ್ತ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ವೆಂಕಟಾಚಲ ಮನವಿ ಮಾಡಿದ್ದಾರೆ.

(Visited 2 times, 1 visits today)