ತುಮಕೂರು
ತಾಲ್ಲೂಕಿನ ವಿವಿಧ ವಸತಿ ನಿಲಯಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್ ಕಾರ್ಮಿಕರ ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ (ಎಐಯುಟಿಯುಸಿ) ವತಿಯಿಂದ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಹಾಸ್ಟೆಲ್ ಕಾರ್ಮಿಕರಿಗೆ ಕಳೆದ 2-3 ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಇಎಸ್‍ಐ, ಪಿಎಫ್ ಹಣ ಕಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ವೇತನ ಆಯಾ ತಿಂಗಳಲ್ಲಿ ಬಿಡುಗಡೆಯಾಗಿದೆ. ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ. ಇತ್ತೀಚೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹೊರಡಿಸಿದ ಸುತ್ತೊಲೆಯಂತೆ ಹಾಸ್ಟೆಲ್ ಕಾರ್ಮಿಕರಿಗೆ ತಿಂಗಳ ವೇತನ ಆಯಾ ತಿಂಗಳ 5ನೇ ತಾರೀಖಿನ ಒಳಗೆ ತಲುಪಿಸಬೇಕು, ವೇತನ ಚೀಟಿ ನೀಡಬೇಕು, ಇಎಸ್‍ಐ, ಪಿಎಫ್ ಜಮಾ ಆಗಿರುವ ಬಗ್ಗೆ ಸಂಬಂಧಪಟ್ಟವರಿಂದ ದಾಖಲಾತಿ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಕೆ.ವಿ. ಭಟ್ ಮಾತನಾಡಿ, ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಬರುವ ಅಲ್ಪ ವೇತನಕ್ಕೂ ತಿಂಗಳು ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ವಿದ್ಯಾರ್ಥಿ ನಿಲಯವನ್ನು ತಮ್ಮ ಮನೆಯಷ್ಟೇ ಪ್ರೀತಿಸುವ ಗುಣ ಕಾರ್ಮಿಕರಲ್ಲಿ ಇದೆ. ಹಾಗಾಗಿ ಅವರು ನಿಯಮದಂತೆ 8 ಗಂಟೆಗೂ ಅಧಿಕವಾಗಿ ಕೆಲಸ ಮಾಡುವರು. ಆದ್ದರಿಂದ ವಿವಿಧ ವಿದ್ಯಾರ್ಥಿನಿಲಯಗಳ ಬಾಕಿ ಇರುವ ವೇತನವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕು ಮತ್ತು ಅವರ ಇತರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಸಮಸ್ಯೆಗಳ ಇತ್ಯರ್ಥಕ್ಕೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ವಸತಿನಿಲಯ, ವಸತಿ ಶಾಲೆ/ ಕಾಲೇಜು / ಆಶ್ರಮ ಶಾಲೆಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ. ಗ್ರೂಪ್ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರನ್ನು ಖಾಯಂಗೊಳಿಸಬೇಕು. ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಏಜೆನ್ಸಿಗಳಿಂದ ನೇಮಕಾತಿ ಪತ್ರ, ಸಮವಸ್ತ್ರ ಮತ್ತು ಗುರುತಿನ ಚೀಟಿ ಕೊಡಿಸಬೇಕು. ಕಾನೂನು ಬದ್ಧವಾಗಿ ನೀಡಲೇಬೇಕಾದ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆಗಳನ್ನು ನೀಡಬೇಕು. ಒಂದು ವೇಳೆ ರಜೆಯ ದಿನಗಳಲ್ಲಿ ಕೆಲಸ ಮಾಡಿಸಿಕೊಂಡಲ್ಲಿ ಕಾರ್ಮಿಕ ಕಾಯ್ದೆಯ ಅನ್ವಯ ವೇತನ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರೇಮ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಾ. ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ವಿದ್ಯಾರ್ಥಿನಿಲಯ, ವಸತಿ ಶಾಲೆಗಳ ಗುತ್ತಿಗೆ ಆಧಾರದ ನೌಕರರು ಪಾಲ್ಗೊಂಡಿದ್ದರು.