ತುಮಕೂರು
ಕರ್ನಾಟಕ ಸರಕಾರದ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಜನರಿಗೆ ಸಾಲ, ಸೌಲಭ್ಯ ಕೊಡಿಸುವುದಾಗಿ ನಂಬಿಸಿ, ಗುಬ್ಬಿ ತಾಲೂಕು ಕೊಮ್ಮನಹಳ್ಳಿಯ ಗುರುಸ್ವಾಮಿ ಕೆ.ಆರ್.ಬಿನ್ ರಂಗಶಾಮಯ್ಯ ನೂರಾರು ಜನರಿಂದ 10 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿ,
ಪರಾರಿಯಾಗಿದ್ದು,ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ,ಗುಬ್ಬಿ ತಾಲೂಕಿನ ಹತ್ತಾರು ಜನರು ಇಂದು ಕುಪ್ಪೂರು ಶ್ರೀಧರನಾಯಕ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಎಸ್.ಪಿ.ಕಚೇರಿಗೆ ಮನವಿ ಸಲ್ಲಿಸಿದ ಗುಬ್ಬಿ ತಾಲೂಕಿನ ಸಾಗಸಂದ್ರದ ಬಸವರಾಜು,ನಾಗಣ್ಣ,ಶಂಕರಮ್ಮ,ನಟರಾಜು ಉನಗನಾಲದ ಕೃಷ್ಣಮೂರ್ತಿ,ಕೆರೆಮಾದನಹಳ್ಳಿಯ ಬಸವರಾಜು,ಮಹಾಲಿಂಗಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರು, ಗುರುಸ್ವಾಮಿ ಕೆ.ಆರ್.ಅವರು ನನಗೆ ಶಾಸಕರು,ಸಚಿವರು,ನಿಗಮದ ಅಧ್ಯಕ್ಷರುಗಳು ಗೊತ್ತು ಎಂದು ಹೇಳಿ,ನಿಮಗೆ ನಿಗಮದವತಿ ಯಿಂದ ಗಂಗಕಲ್ಯಾಣದಲ್ಲಿ ಕೊಳವೆ ಬಾವಿ, ನೇರ ಸಾಲದಲ್ಲಿ ಟ್ಯಾಕ್ಟರ್ ಖರೀದಿಗೆ ಸಾಲ,ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಕೊಡಿಸುವುದಾಗಿ ಹತ್ತಾರು ಸಾವಿರ ರೂ ಪಡೆದು, ಪರಾರಿಯಾಗಿದ್ದಾನೆ.
ಗುರುಸ್ವಾಮಿ ಕೆ.ಆರ್. ಬಿನ್ ರಂಗಶಾಮಯ್ಯ ಅವರು ನಮ್ಮ ಬಳಿ ವ್ಯವಹಾರ ನಡೆಸುವಾಗ ನೀಡಿದ್ದ ಎರಡು ಪೋನ್ ನಂಬರ್ ಗಳಿಗೆ ಕರೆ ಮಾಡಿದರೆ ಸ್ವಿಚ್ ಅಫ್ ಬರುತ್ತಿದೆ.ಗುಬ್ಬಿ ತಾಲೂಕು ಅಲ್ಲದೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಯೂ ಈ ರೀತಿಯ ಮೋಸ ಮಾಡಿರುವ ದೂರುಗಳು ಕೇಳಿ ಬರುತ್ತಿವೆ.ಹಾಗಾಗಿ ಸದರಿ ವ್ಯಕ್ತಿಯನ್ನು ಪತ್ತೆ ಹಚ್ಚಿ ತನಿಖೆಗೆ ಒಳಪಡಿಸುವುದರ ಜೊತೆಗೆ,ನಾವು ನೀಡಿರುವ ಹಣ ಕೋಡಿಸಿ, ಈತ ಮತ್ಯಾರಿಗೂ ಮೋಸ ಮಾಡದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.