ತುಮಕೂರು


ಯುವಜನತೆ ತಮ್ಮ ರಾಷ್ಟ್ರಾಭಿಮಾನವನ್ನು ಚುನಾವಣೆ ಸಂದರ್ಭದಲ್ಲಿ ತೋರಿಸಿದರೆ ಸಾಲದು, ಮಹಿಳೆಯರು, ಮಕ್ಕಳು, ಅಸಾಹಯಕರ ಮೇಲೆ ದೌರ್ಜನ್ಯಗಳಾದಾಗಲೂ ಪ್ರತಿಭಟಿಸುವ ಮೂಲಕ ದೇಶಾಭಿಮಾನವನ್ನು
ತೋರಿಸುವ ಅಗತ್ಯವಿದೆ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಹಸುಗೂಸುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸುವ ಕಾನೂನು ಬರುವಂತೆ ಸರಕಾರಗಳ ಮೇಲೆ ಒತ್ತಡ ತರುವ ಕೆಲಸ ಮಾಡಬೇಕಿದೆ ಎಂದರು.
ಜಯಕರ್ನಾಟಕ ಸಂಘಟನೆ ಸ್ವಾರ್ಥಕ್ಕಾಗಿ ಹುಟ್ಟಿಕೊಂಡ ಸಂಘಟನೆಯಲ್ಲ.ಬಡವರು,ಅಶಕ್ತರ ಪರವಾಗಿ ಸಾಮಾಜಿಕ ಕಳಕಳಿಯಿಂದ ಹುಟ್ಟಿಕೊಂಡ ಸಂಸ್ಥೆಯಾಗಿದೆ.ಇಂದು ಇಡೀ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಕಳೆದ ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ಲೈಗಿಂಕ ದೌರ್ಜನ್ಯಕ್ಕೆ ಒಳಗಾಗಿ ಹತ್ಯೆಗೀಡಾದ ಕುಮಾರಿ ದಿವ್ಯಾ ಅವರ ಆತ್ಮಕ್ಕೆ ಶಾಂತಿ ಕೋರಿದ್ದೇವೆ. ಇದು ಸಾಲದು, ಇಂತಹ ಕೃತ್ಯವೆಸಗುವ ವ್ಯಕ್ತಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ಬರುವಂತೆ ಹೋರಾಟ ನಡೆಸಬೇಕಿದೆ.ಯುವಜನತೆ ದೇಶದ ಆಸ್ತಿ.ತಾರತಮ್ಯ ರಹಿತ ಸಮಾಜದ ನಿರ್ಮಾಣ ನಮ್ಮ ಗುರಿಯಾಗಬೇಕು ಎಂದು ಡಾ.ಬಿ.ಎನ್.ಜಗದೀಶ್ ತಿಳಿಸಿದರು.
ದೇಶದ ಯುವಜನರನ್ನು ಮಾದಕ ವಸ್ತುಗಳ ವ್ಯಸನ ಮತ್ತು ನಿರುದ್ಯೋಗ ಕಿತ್ತು ತಿನ್ನುತ್ತಿದೆ.ವಿದ್ಯಾವಂತ ಯುವಜನರು ಉದ್ಯೋಗವಿಲ್ಲದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ.ದುಡಿಯುವ ಕೈಗಳಿಗೆ ಕೆಲಸ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.ಈ ನಿಟ್ಟಿನಲ್ಲಿ ಜಯಕರ್ನಾಟಕ ಮುಂದಿನ ದಿನಗಳಲ್ಲಿ ಅಭಿಯಾನ ಆರಂಭಿಸಲಿದೆ ಎಂದರು.
ಜಯಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ ಮಾತನಾಡಿ,ಜಯಕರ್ನಾಟಕ ಸಂಘಟನೆ ಹೊಸ ನಾಯಕರನ್ನು ಸೃಷ್ಟಿಸುವ ಕೆಲಸವನ್ನು ಆರಂಭದಿಂದಲೂ ಮಾಡುತ್ತಾ ಬಂದಿದೆ.ಯುವಕರಲ್ಲಿ ಮೊದಲು ನಾವು ಭಾರತೀಯರು, ಆ ನಂತರ ಕನ್ನಡಿಗರು ಎಂಬ ಉದ್ದಾತ್ತ ಗುಣಗಳನ್ನು ತುಂಬುವುದರ ಜೊತೆಗೆ,ಸರಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಕಾರ್ಯಕರ್ತರಲ್ಲಿ ತುಂಬುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಯುವಘಟಕ, ಮಹಿಳಾ ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಮತ್ತಷ್ಟು ಶಕ್ತಿ ತುಂಬಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ರಂಗಸ್ವಾಮಿ ವಹಿಸಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ,ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಮುನಿಸ್ವಾಮಿ,ಹರೀಶ್, ರಜತ್,ಶ್ರೀಮತಿ ವಿಜಯ, ಶ್ರೀಮತಿ ಮಂಜುಳ, ದಿವ್ಯಾಸೋಮಶೇಖರ್,ಚೇತನ್ ದಾಸರಹಳ್ಳಿ, ತುಮಕೂರು ನಗರಾಧ್ಯಕ್ಷ ದೀಕ್ಷಿತ್, ಯುವಘಟಕದ ಅಧ್ಯಕ್ಷ ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದು. ಇದೇ ವೇಳೆ ನೂರಕ್ಕೂ ಹೆಚ್ಚು ಯುವಕರು ಜಯಕರ್ನಾಟಕ ಸಂಘಟನೆಗೆ ಸೇರ್ಪಡೆಗೊಂಡರು.

(Visited 1 times, 1 visits today)