ತುಮಕೂರು
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕನಸು ನನಸಾಗಬೇಕೆಂದರೆ ರೈತರು ಉತ್ತಮ ಬೆಳೆ ಬೆಳೆದು ಆದಾಯವನ್ನು ದುಪ್ಪಟ್ಟು ಹೆಚ್ಚಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಸಂಸದ ಜಿ.ಎಸ್. ಬಸವರಾಜು ಅಭಿಪ್ರಾಯಪಟ್ಟರು.
ನಗರದ ರೇಷ್ಮೆ ಕೃಷಿ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ರೇಷ್ಮೆ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿಪರ ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಬೆಳೆಯುವಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಶೇ.80 ರಷ್ಟು ರೇಷ್ಮೆ ಉತ್ಪಾದನೆ ಮಾಡುತ್ತಿರುವ ರಾಜ್ಯವಾಗಿದೆ ಎಂದರು.
ರೇಷ್ಮೆ ಬೆಳೆ ಬೆಳೆಯಲು ಉತ್ತಮ ವಾತಾವರಣವೂ ನಮ್ಮ ರಾಜ್ಯದಲ್ಲಿರುವುದರಿಂದ ಪ್ರತೀ ವರ್ಷ ರೇಷ್ಮೆ ಬೆಳೆ ಬೆಳೆಯುವ ರೈತರು ಹೆಚ್ಚಾಗುತ್ತಿದ್ದಾರೆ. ಇದರಿಂದ ಆತ್ಮನಿರ್ಭರ ಭಾರತ್ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಹೇಳಿದರು.
ಇತ್ತೀಷಿನ ದಿನಗಳಲ್ಲಿ ಹೊಸ ಹೊಸ ಸಂಶೋಧನೆ ಮುಖಾಂತರ ರೈತರು ಯಾವ ರೀತಿ ಬೆಳೆ ಬೆಳೆಯಬಹುದು ಎಂಬುದನ್ನು ಕಂಡುಕೊಂಡಿದ್ದು, ರೇಷ್ಮೆ ಕೃಷಿಯ ಮೂಲಕ ಅತ್ಯಂತ ಸಂಪತ್ಪಭರಿತವಾದ ಆದಾಯ ಕೊಡುವ ಬೆಳೆಯನ್ನು ಅತಿ ಹೆಚ್ಚಾಗಿ ಬೆಳೆಯಲು ಆರಂಭಿಸಿದ್ದಾರೆ. ಇದರಿಂದ ಅವರ ಆದಾಯವೂ ಕೂಡ ಹೆಚ್ಚಲಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣ ಮಾತನಾಡಿ,
ಹಿಂದೆ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿತ್ತು, ಅಂದು ನಮ್ಮ ಹಳೇ ತಳಿಯಲ್ಲಿ ಒಂದು ಎಕರೆಯಲ್ಲಿ ಬೆಳೆಯುತ್ತಿದ್ದಂತಹ ತಳಿ ಇಂದು 18ರಿಂದ 20 ಗುಂಟೆಯಲ್ಲಿ ಬೆಳೆಯಲಾಗುತ್ತಿದೆ. ಅಂದು 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಜ್ಯದಲ್ಲಿ ಬೆಳೆಯುತ್ತಿರುವ ರೇಷ್ಮೆಗೂಡನ್ನು ಇಂದು ಕೇವಲ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದರು.
ಇಡೀ ರಾಜ್ಯದಲ್ಲಿ ಬೆಳೆಯುತ್ತಿರುವ ಎಲ್ಲಾ ತಳಿಗೂಡು ಸಹ ನಮ್ಮ ಕುಣಿಗಲ್ ನಾಟಿಗೂಡಾಗಿದೆ. ಅದಕ್ಕೆ ಕ್ರಾಸ್‍ಮಾಡುವುದರಿಂದ ಮಿಶ್ರತಳಿ ಗೂಡಾಗಿದೆ. ಇಡೀರಾಜ್ಯದ 80 ಸಾವಿರ ಮೆಟ್ರಿಕ್ ಟನ್‍ನಲ್ಲಿ ಶೇ.80 ಭಾಗ ಮಿಶ್ರತಳಿ, ಚೀನಾದೇಶದ ಗೂಡು ಬರದಂತೆ ನೋಡಿಕೊಳ್ಳಬೇಕೆಂದು ವಿಶ್ವಬ್ಯಾಂಕ್ ಹಾಗೂ ನಿಮ್ಮ ಅಂದಿನ ಹೋರಾಟದ ಫಲ ಸಕ್ಸಸ್ ಆಗಲಿಲ್ಲ, ಜಪಾನ್‍ನವರು ಬಂದು ತುರುವೇಕೆರೆ, ಶಿರಾ ಸೇರಿದಂತೆ ರಾಜ್ಯದ 8 ಭಾಗಗಳಲ್ಲಿ ಸಕ್ಸಸ್ ಮಾಡಿದ ಪರಿಣಾಮ ಒಂದು ಎಕರೆಯಲ್ಲಿ ರೈತರು 800 ರಿಂದ 1250 ಕೆಜಿ ಗೂಡು ಬೆಳೆಯುತ್ತಿದ್ದಾರೆ ಎಂದು ಹೇಳಿದರು.
ಇನ್ಮುಂದೆ ಒಂದು ವರ್ಷದಲ್ಲಿ ಒಂದು ಸಾವಿರ ಜನರು ರೇಷ್ಮೆ ಬೆಳೆಯುವಂತೆ ಮಾಡುತ್ತೇವೆ. ಇದಕ್ಕೆ ಬೇಕಾದ 35 ಲಕ್ಷ ಸಸಿಯನ್ನು ರೈತರ ಬಳಿ ನರೇಗಾದಲ್ಲಿ ಅರಣ್ಯ ಇಲಾಖೆಯಲ್ಲಿ ಬೆಳೆಸಿ
ಕಳೆದ ವರ್ಷ 1258 ಎಕರೆ ರೇಷ್ಮೆ ಮಾಡಿಸಿ 1001 ರೈತರು 700 ಮಂದಿ ಹೊಸಬರು 301 ಮಂದಿ ಹಳಬರ ಆಯ್ಕೆ ಮಾಡಲಾಯಿತು.
ಈ ವರ್ಷ ರಾಜ್ಯ ಸರ್ಕಾರ ಕೇವಲ 350 ಹೆಕ್ಟೇರ್ ಮಾತ್ರ ನಿಗಧಿ ಮಾಡಿದೆ. ನಾವು 550 ಹೆಕ್ಟೇರ್ ಗುರಿಯನ್ನು ಹಾಕಿಕೊಂಡಿದ್ದು, ಈಗಾಗಲೇ ಸೆಪ್ಟೆಂಬರ್ 30ಕ್ಕೆ 498 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆಗೂಡು ಬೆಳೆಯುತ್ತಿದ್ದಾರೆ. ಈಗ ರೇಷ್ಮೆಗೂಡಿಗೆ ಉತ್ತಮ ಬೆಳೆಯಿದ್ದು, ಬಹಳಷ್ಟು ಮಂದಿ ಯುವಕರು ರೇಷ್ಮೆ ಬೆಳೆಯಲು ಮುಂದೆ ಬಂದಿದ್ದು, ಈ ವರ್ಷ 1000ದಿಂದ 1250 ಕುಟುಂಬಗಳು ಹೊಸ ರೇಷ್ಮೆ ಬೆಳೆಗಾರರಾಗಬೇಕೆಂಬುದೇ ನನ್ನ ಗುರಿ. ಈಗಿರುವ 10ಸಾವಿರದ ಜೊತೆಗೆ 11 ಸಾವಿರ ಮಂದಿ ರೇಷ್ಮೆ ಬೆಳೆಯುವಂತಾಗಬೇಕು ಎಂದರು.
ರೇಷ್ಮೆ ಇಲಾಖೆಯಲ್ಲಿರುವ 111 ಸಿಬ್ಬಂದಿ ಇರಬೇಕಿತ್ತು. ಕುಣಿಗಲ್ ಹೊರತು ಪಡಿಸಿ ಕೇವಲ ನಾವಿರುವುದು 40 ಸಿಬ್ಬಂದಿ ಮಾತ್ರ. ನಮ್ಮ ಕಚೇರಿಯೂ ಸೇರಿ 9 ತಾಲ್ಲೂಕುಗಳಿವೆ. ಹೀಗಾಗಿ ಪ್ರತಿ ತಾಲ್ಲೂಕಿನಲ್ಲಿ ಹಳೇ ರೈತರು ಹೊಸ ರೈತರನ್ನೊಳಗೊಂಡ ಗುಂಪು ಸಭೆಯನ್ನು ಮಾಡಿ ಪ್ರತೀ ವರ್ಷ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತಿಪಟೂರು ತಾಲ್ಲೂಕು ನೊಣವಿನಕೆರೆ ರೇಷ್ಮೆ ಬೆಳೆಗಾರ ಎಸ್.ವಿ.ಸ್ವಾಮಿ ಮಾತನಾಡಿ, ರೇಸ್ಮೆ ಕೃಷಿ ಜೊತೆಗೆ ಹೈನುಗಾರಿಯನ್ನು ಮಾಡುತ್ತಿದ್ದು, ರೇಷ್ಮೆ ಬೆಳೆ ಬಗ್ಗೆ ಇಂದಿನ ಯುವ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ರೇಷ್ಮೆ ಬೆಳೆಯಲ್ಲಿ ಅತ್ಯುತ್ತಮವಾಗಿ ರೇಷ್ಮೆ ಬೆಳೆದು ಜಿಲ್ಲೆಯ ಹಾಗೂ ರಾಜ್ಯಮಟ್ಟದಲ್ಲೂ ಮೊದಲ ಬಹುಮಾನ ಪಡೆದು ಯಶಸ್ವಿ ರೇಷ್ಮೆ ಬೆಳೆಗಾರನಾಗಿದ್ದೇನೆ. ರೇಷ್ಮೆ ಇಲಾಖೆಯನ್ನು ಸ್ವತಂತ್ರ್ಯ ಇಲಾಖೆ ಮಾಡಬೇಕೆ ಹೊರತು ವಿಜ್ಞಾನಿಗಳು ಮತ್ತು ರೈತರ ನೇರ ಸಂಪರ್ಕ ಇರಬೇಕಾದಂತಹ ರೇಷ್ಮೆ ಬೆಳೆಯಾಗಿದೆ. ಇದನ್ನು ಕೃಷಿ ಇಲಾಖೆಗೆ ವಿಲೀನಗೊಳಿಸಿದರೆ ತುಂಬಾ ಅನಾಹುತವಾಗಲಿದೆ ಎಂಬುದು ರಾಜ್ಯಾದ್ಯಂತ ಕಾಡುತ್ತಿದ್ದು, ಆದುದರಿಂದ ಯಾವುದೇ ಕಾರಣಕ್ಕೂ ವಿಲೀನಗೊಳಿಸಬಾರದು ಎಂಬುದೇ ನಮ್ಮ ಉದ್ಧೇಶವಾಗಿದೆ ಎಂದರು.
ಕಳ್ಳನಕೆರೆ ರೇಷ್ಮೆ ಬೆಳೆಗಾರ ಶಿವಾನಂದ ಮಾತನಾಡಿ, ಸರ್ಕಾರ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸಿದರೆ ರೇಷ್ಮೆ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಮುಂದೆ ಸಾಕಷ್ಟು ತೊಂದರೆಗಳಾಗಲಿದ್ದು, ಯಾವುದೇ ಕಾರಣಕ್ಕೂ ಕೃಷಿಇಲಾಖೆಯೊಂದಿಗೆ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸಬಾರದು ಎಂದು ಒತ್ತಾಯ ಮಾಡಿದರು.
ಇದೇ ಸಂದರ್ಭದಲ್ಲಿ ಚಂದ್ರಕಲಾ, ಹನುಮಂತರಾಯಪ್ಪ, ಕೆಂಪಣ್ಣ, ರಾಮಕೃಷ್ಣಯ್ಯ ಅವರಿಗೆ ಸಹಾಯಧನ ವಿತರಿಸಲಾಯಿತು.
ಸಂವಾದ ಕಾರ್ಯಕ್ರಮದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಎ.ಸಿ.ನಾಗೇಂದ್ರ, ರೇಷ್ಮೆ ನಿರೀಕ್ಷಕ ಎಂ.ಎ.ಬೊಮ್ಮಯ್ಯ, ಕೊರಟಗೆರೆ ರೇಷ್ಮೆ ಸಹಾಯಕ ನಿರ್ದೇಶಕ ಮುರಳೀಧರ, ಮಧುಗಿರಿ ರೇಷ್ಮೆ ಸಹಾಯಕ ನಿರ್ದೇಶಕ ಲಕ್ಷ್ಮೀನರಸಯ್ಯ ಸೇರಿದಂತೆ ಜಿಲ್ಲೆಯ ರೇಷ್ಮೆ ಇಲಾಖೆ ಅಧಿಕಾರಿಗಳು, ರೇಷ್ಮೆ ಬೆಳೆಗಾರರು ಭಾಗವಹಿಸಿದ್ದರು.