ಚಿಕ್ಕನಾಯಕನಹಳ್ಳಿ :
ನವೋದಯ ಕಾಲೇಜಿನ ಆವರಣದಲ್ಲಿ ಡಿ.24ರಂದು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಅನುಕೂಲವನ್ನು ಪಡೆಯಬೇಕು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ, ಆಶಾಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕ್ಯಾನ್ಸರ್ ಖಾಯಿಲೆ ಬಂದರೆ ರೋಗಿಯು ಸಾವನ್ನಪ್ಪುತ್ತಾನೆ, ಕ್ಯಾನ್ಸರ್ ಖಾಯಿಲೆಯನ್ನು ಮೊದಲ ಹಂತದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ಪಡೆದರೆ ರೋಗಿಯು ಗುಣಮುಖಿಯಾಗಿ ಬದುಕುತ್ತಾನೆ, ಈ ನಿಟ್ಟಿನಲ್ಲಿ ತಾಲ್ಲೂಕಿನ ಜನರ ಹಿತಾಸಕ್ತಿಗಾಗಿ ಕ್ಯಾನ್ಸರ್ ಶಿಬಿರವನ್ನು ನವೋದಯ ಸಂಸ್ಥೆ ಆಡಳಿತ, ಕಿದ್ವಾಯಿ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು.
ತಾಲ್ಲೂಕು ಆರೋಗ್ಯ ಇಲಾಖೆಯು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬರುವ ರೋಗಿಯನ್ನು ಗುರುತಿಸಿ ಶಿಬಿರಕ್ಕೆ ಕರೆತನ್ನಿ ಎಂದು ಸೂಚನೆ ನೀಡಿದರು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ 10ರಿಂದ 12ಜನ ನುರಿತ ವೈದ್ಯರ ತಂಡ ಶಿಬಿರಕ್ಕೆ ಆಗಮಿಸುತ್ತಿದ್ದು ಶಿಬಿರದಲ್ಲಿ ಕ್ಯಾನ್ಸರ್ ರೋಗವನ್ನು ತಪಾಸಣೆ ಮಾಡಿ ಖಾಯಿಲೆ ಇರುವ ರೋಗಿಯನ್ನು ಪತ್ತೆ ಹಚ್ಚಲಾಗುವುದು ಮತ್ತು ಕಿದ್ವಾಯಿಯಲ್ಲಿ ಚಿಕಿತ್ಸೆ ನೀಡಲಾಗುವುದು, ಇಂತಹ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಡಿಸಂಬರ್ 24ರ ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ಶಿಬಿರದ ಕಾರ್ಯಕ್ರಮ ನಡೆಯುತ್ತದೆ ಎಂದರು.