ತುಮಕೂರು


ಮಾನಸಿಕ ರೋಗಿಗಳ ಆರೋಗ್ಯ ಮತ್ತು ಯೋಗಕ್ಷೇಮ ನೋಡದೇ ಬೀದಿಯಲ್ಲಿ ಬಿಡುವುದು ಶಿಕ್ಷಾರ್ಹ ಅಪರಾಧವೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ನೇಹ ಮನೋವಿಕಾಸ ಕೇಂದ್ರ, ಅಚರ್ಡ್ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನಸಿಕ ರೋಗಿಗಳಿಗೆ ಸಮಾಜದಲ್ಲಿ ಬದುಕಲು ಅವಕಾಶ ನೀಡಬೇಕು. ಅವರನ್ನು ನಿರ್ಲಕ್ಷಕ್ಕೊಳಪಡಿಸಿದರೆ ಕಾನೂನಿನಡಿ 1ಲಕ್ಷ ರೂ. ದಂಡ, 1 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. ಮಾನಸಿಕ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಕಷ್ಟವಾದಲ್ಲಿ ನ್ಯಾಯಧೀಶರಿಗೆ
ಅಥವಾ ಜಿಲ್ಲಾ ಆರೋಗ್ಯ ಇಲಾಖೆಯ ತಜ್ಞರ ಗಮನಕ್ಕೆ ತಂದರೆ ಅವರನ್ನು ನಿಮ್ಹಾನ್ಸ್ ಸೇರಿದಂತೆ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ದಾಖಲಿಸಲಾಗುವುದು ಎಂದು
ಮಾನಸಿಕ ಅಸ್ವಸ್ಥರಿಗೂ ಜೀವಿಸುವ ಹಕ್ಕು ಸೇರಿದಂತೆ ಅವರದೇ ಆದ ಹಕ್ಕುಗಳಿವೆ. ಅವರನ್ನು ಬೀದಿಗೆ ಬಿಡದೇ ಪ್ರೀತಿಯಿಂದ ಸಲಹಬೇಕು. ಪೋಷಕರಿಂದ ಸಲಹಲು ಸಾಧ್ಯವಾಗದಿದ್ದರೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಲ್ಲಿ ಅವರನ್ನು ನಿಮ್ಹಾನ್ಸ್ ಸೇರಿದಂತೆ ವಿವಿಧ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ದಾಖಲಿಸಿ ಗುಣಮುಖರಾಗುವವರೆಗೆ ಆರೈಕೆ ಮಾಡಲಾಗುವುದು ಎಂದರು.
ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ|| ಲೋಕೇಶ್ ಬಾಬು ಮಾತನಾಡಿ ಪ್ರಪಂಚದ ಪ್ರತಿಯೊಬ್ಬ ಮಾನಸಿಕ ರೋಗಿಗೂ ಆರೋಗ್ಯ ಸೇವೆ ಸಿಗಬೇಕು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯಡಿ ಮನೋವೈದ್ಯರಿದ್ದು ಮಾನಸಿಕ ರೋಗಿಗಳು ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಡಿ.ಎನ್. ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ: ವೀಣಾ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ|| ಎಂ. ಶ್ರೀದೇವಿ ಚಂದ್ರಿಕಾ, ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)