ತುಮಕೂರು


ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಅವರು ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕರೆ ನೀಡಿದರು.
ನಗರದ ಎ.ಟಿ.ಡಿ.ಸಿ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಮತ್ತು ಎ.ಟಿ.ಡಿ.ಸಿ ಕೌಶಲ್ಯ ತರಬೇತಿ ಕೇಂದ್ರದ ಸಹಯೋಗದಲ್ಲಿಂದು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಕಾರ್ಯಕ್ರಮದ ಸಂಕಲ್ಪ ಯೋಜನೆಯಡಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಟೂಲ್‍ಕಿಟ್ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ
ಎಲ್ಲರಿಗೂ ನೌಕರಿ ದೊರೆಯುವುದು ಸುಲಭವಲ್ಲ. ಸರ್ಕಾರಿ ಉದ್ಯೋಗ ದೊರೆಯಬೇಕೆಂದರೆ ನಿಗಧಿಪಡಿಸಿದ ವಿದ್ಯಾಭ್ಯಾಸ ಹೊಂದಿರಬೇಕು. ವಿದ್ಯಾಭ್ಯಾಸ ಇಲ್ಲದಿರುವವರಿಗೆ ಇಂತಹ ಕೌಶಲ್ಯ ತರಬೇತಿ ಪ್ರಯೋಜಕಾರಿಯಾಗಿದೆ. ಕೌಶಲ್ಯ ತರಬೇತಿ ಪಡೆದವರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ತರಬೇತಿ ಪಡೆದವರು ಗಾರ್ಮೆಂಟ್ಸ್ ಉದ್ಯೋಗ ಹಾಗೂ ಸ್ವಯಂ ಉದ್ಯೋಗವನ್ನು ಹೊಂದಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಲಿಗೆ ಕೆಲಸವು ಆದಾಯಕರವಾಗಿದ್ದು, ಶ್ರಮವಹಿಸಿ ಶ್ರದ್ಧೆಯಿಂದ ಹೊಲಿಗೆ ಕೆಲಸ ಮಾಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಸಂಪಾದಿಸಿ ಆದಾಯವನ್ನು ಗಳಿಸಬಹುದಾಗಿದೆ. ಯಾರೇ ಆಗಲಿ ಸಾಧಿಸುವ ಛಲ ಹೊಂದಿದ್ದರೆ ಜೀವನದಲ್ಲಿ ಮುಂದೆ ಬರಬಹುದು. ಉಚಿತ ಕೌಶಲ್ಯ ತರಬೇತಿಯನ್ನು ಪಡೆದವರು ಸದುಪಯೋಗಪಡಿಸಿಕೊಂಡಾಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಅಪೆರಲ್ ಟ್ರೈನಿಂಗ್ ಅಂಡ್ ಡಿಸೈನ್ ಕೇಂದ್ರ(ಎಟಿಡಿಸಿ)ದ ಮುಖ್ಯಸ್ಥೆ ಕೋಮಲ ಮಾತನಾಡಿ, ಎಟಿಡಿಸಿ ವತಿಯಿಂದ ಸರ್ಕಾರದ ವಿವಿಧ ಯೋಜನೆಗಳಡಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಉಚಿತ ಟೈಲರಿಂಗ್ ಹಾಗೂ ಎಂಬ್ರಾಯಿಡರಿ ತರಬೇತಿಯನ್ನು ನೀಡಲಾಗುತ್ತಿದೆ. ಈವರೆವಿಗೂ 3760 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ತರಬೇತಿ ಪಡೆದ ಶೇ.75 ಅಭ್ಯರ್ಥಿಗಳಿಗೆ ಗಾರ್ಮೆಂಟ್ಸ್ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ಉಳಿದ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕ ಸುಧಾರಣೆ ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಟೂಲ್‍ಕಿಟ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಸಹಾಯಕ ನಿರ್ದೇಶಕ ಬಿ. ವಿಶ್ವೇಶ್ವರ, ಸಹಾಯಕ ನಿಯಂತ್ರಕ ವಿ. ಶ್ರೀನಿವಾಸ ರಾವ್, ಎ.ಟಿ.ಡಿ.ಸಿಯ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ರಮೇಶ್ ಸೇರಿದಂತೆ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

(Visited 1 times, 1 visits today)