ಪಾವಗಡ


ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ. ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನೂರಾರು ಜನರು ಸಂಕಷ್ಟಕ್ಕೊಳಗಾದರೆ ಇನ್ನೂ ಕೆಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ ಜನಜೀವನ ಅಸ್ತವ್ಯಗೊಂಡಿದೆ.
ತಾಲ್ಲೂಕು ಕೇಂದ್ರದಿಂದ ಶಿರಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಕಿಲಾರ್ಲಹಳ್ಳಿ ಬಳಿ ರಸ್ತೆಯ ಮೇಲೆ ಸುಮಾರು ಮೂರರಿಂದ ನಾಲ್ಕು ಅಡಿ ನೀರು ಹರಿಯುತ್ತಿದ್ದು ಮತ್ತು ಗುಂಡಿಗಳಿಂದ ಕೂಡಿರುವುದರಿಂದ ರಸ್ತೆ ದಾಟಲು ವಾಹನ ಸವಾರರು ಹರ ಸಾಹಸ ಪಡುವಂತಾಗಿದೆ. ಇಲ್ಲಿ ಸೇತುವೆ ಇಲ್ಲದೆ ಇರುವುದೇ ಈ ಅವಾಂತರಕ್ಕೆ ಕಾರಣವಾಗಿದ್ದು , ಅನ್ಯಮಾರ್ಗವಿಲ್ಲದೆ ವಾಹನ ಸವಾರರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಇಲ್ಲೇ ಚಲಿಸುವ ಸ್ಥಿತಿ ನಿರ್ಮಾಣವಾಗಿದೆ.
ಕನ್ನಮೆಡಿ, ಕೊತ್ತೂರು , ಹರಿಹರಪುರ ಹಾಗೂ ಸಿಕೆಪುರ ಗ್ರಾಮಗಳ ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಎಲ್ಲಾ ಕೆರೆಗಳ ನೀರು ಇದೇ ರಸ್ತೆ ಮೇಲೆ ಹೋಗುವುದರಿಂದ ಈ ರಸ್ತೆ ಮಾರ್ಗ ತುಂಬಾ ಅಪಾಯ ಸ್ಥಿತಿಯಲ್ಲಿದೆ.
ಸುಮಾರು ಒಂದು ತಿಂಗಳ ಹಿಂದೆ ಸುರಿದ ಮಳೆಯಿಂದ ಇದೇ ಸ್ಥಿತಿ ಅಂದು ನಿರ್ಮಾಣವಾಗಿತ್ತು. ಆಗಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಸೇತುವೆ ನಿರ್ಮಾಣ ಮಾಡಿದ್ದರೆ ಈಗ ಇಂಥ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಕಾಟಚಾರಕ್ಕೆ ರಸ್ತೆಯ ಮೇಲೆ ಮಣ್ಣನ್ನು ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ರಸ್ತೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.

(Visited 1 times, 1 visits today)