ಪಾವಗಡ
ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಈ ಗಡಿ ಪ್ರದೇಶ ನಿರಂತರವಾಗಿ ತುತ್ತಾಗುತ್ತಿದ್ದು ಈ ಬಾರಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರು ತಮ್ಮ ಜಮೀನಿನಲ್ಲಿ ಇಟ್ಟ ಫಸಲು ಕೈಗೆ ಬಾರದೆ ಮಣ್ಣಲ್ಲೇ ಕೊಳೆತು ಮಣ್ಣಾಗಿ ಹೋಗುವ ಸ್ಥಿತಿ ನಿರ್ಮಾಣಗೊಂಡಿರುವುದರಿಂದ ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ಕನ್ನಮೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವೀರ್ಲಗೊಂದಿ ಗ್ರಾಮದ ಸರ್ವೆ ನಂಬರ್ 5 / 2 ಹಾಗೂ 7/1 ರ ಸುಮಾರು 7 ಎಕರೆ ಜಮೀನಿನಲ್ಲಿ ಚೌಡಮ್ಮ ಎಂಬ ರೈತ ಮಹಿಳೆ ತಮ್ಮ ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆಯು ಕಟಾವು ಮಾಡಿದ ನಂತರ ನಿರಂತರವಾಗಿ ಸುರಿದ ಮಳೆಯಿಂದಾಗಿ ತಮ್ಮ ಜಮೀನಿನಲ್ಲಿಯೇ ಕೊಳೆತು ಹೋಗುವ ಸ್ಥಿತಿಯಲ್ಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಪೂಜಾರಪ್ಪ , ಯುವ ಘಟಕದ ಕಾರ್ಯದರ್ಶಿ ಶಿವು , ಚನ್ನಗಿರಿಯಪ್ಪ , ಚಿತ್ತಯ್ಯ , ದೊಡ್ಡಯ್ಯ , ಶ್ರೀನಿವಾಸ , ಸುಬ್ರಾಯ , ನಾಗೇಂದ್ರ ಹಾಗೂ ಮುಂತಾದವರು ಹಾಜರಿದ್ದರು.