ತುಮಕೂರು
ಭಾರತ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಡವರಿಗೆ ಸರಕಾರ ನೀಡುವ ಉಚಿತ ಅಕ್ಕಿ ಮತ್ತಿತರರ ದಿನಸಿ ಪದಾರ್ಥಗಳನ್ನು ವಿತರಿಸುತ್ತಿರುವ ಸರಕಾರಿ ನ್ಯಾಯಬೆಲೆ ಅಂಗಡಿಗಳ ಮೇಲೆ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರೆಂದು ಕೆಲ ವ್ಯಕ್ತಿಗಳು ಏಕಾಎಕಿ ದಾಳಿ ನಡೆಸಿ, ಅನಗತ್ಯ ಕಿರುಕುಳ ನೀಡುತ್ತಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ತುಮಕೂರು ಜಿಲ್ಲಾ ಸರಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಸಾವಿರಾರು ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಕೆಲಸಗಾರರು ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ,ನ್ಯಾಯಬೆಲೆ ಅಂಗಡಿಗಳು ಕೋರೋನ ಅಂತಹ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು,ರಾಜ್ಯದ ಸುಮಾರು 4.85 ಕೋಟಿ ಜನರಿಗೆ ಪಡಿತರ ಹಂಚುವ ಮೂಲಕ ಉದಾತ್ತ ಸೇವೆ ಮಾಡಿದೆ.ಆದರೆ ಕೆ.ಆರ್.ಎಸ್.ಪಕ್ಷದ ಕಾರ್ಯಕರ್ತರೆಂದು ಹೇಳುವ ಕೆಲವರು,ಏಕಾಎಕಿ ಅಂಗಡಿಗೆ ನುಗ್ಗಿ, ದಾಖಲೆಗಳನ್ನು ಪರಿಶೀಲಿಸುವುದು,ತೂಕದಲ್ಲಿ ಸಣ್ಣ ವೆತ್ಯಾಸ ಬಂದರೂ ಕೆಲಸಗಾರರು ಮತ್ತು ಅಂಗಡಿ ಮಾಲೀಕರನ್ನು ಬಾಯಿಗೆ ಬಂದಂತೆ ಬೈಯುವುದರಲ್ಲದೆ,ಈ ದೃಶ್ಯಗಳನ್ನು ವಿಡಿಯೋ ಮಾಡಿ,ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು,ಇಡಿ ವ್ಯವಸ್ಥೆಯನ್ನು ಕೆಟ್ಟದ್ದು ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ನಮ್ಮ ವಿರೋಧವಿದೆ. ನಾವು ತಪ್ಪು ಮಾಡಿದರೆ ಶಿಕ್ಷಿಸಲು ಆಹಾರ ಇಲಾಖೆ ಇದೆ.ಜಿಲ್ಲಾಡಳಿತವಿದೆ. ಅದನ್ನು ಬಿಟ್ಟು ಒಂದು ಪಕ್ಷದ ಹೆಸರಿನಲ್ಲಿ ಅಂಗಡಿ ಮಾಲೀಕರಿಗೆ,ಪಡಿತರ ಚೀಟಿದಾರರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದರು.
ಹೆಬ್ಬೂರಿನ ಆರ್. ರಂಗಯ್ಯ ಮಾತನಾಡಿ ನಾವು 30 ವರ್ಷಗಳಿಂದಲೂ ನ್ಯಾಯ ಬೆಲೆ ಅಂಗಡಿ ನಡೆಸಿಕೊಂಡು ಬರುತ್ತಿದ್ದೇವೆ. ಎಂದೂ ಸಹ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿಲ್ಲ. ಈ ಕಾರ್ಯವನ್ನು ಸಮಾಜ ಸೇವೆ ರೀತಿಯ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಈಗ ಕೆ.ಆರ್.ಎಸ್. ಪಕ್ಷದವರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇವರ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಕ್‍ಲೈನ್ ರವಿಕುಮಾರ್, ಗುಬ್ಬಿ ಶಿವಕುಮಾರ್,ಕೊರಟಗೆರೆಯ ಚಿಕ್ಕರಂಗಣ್ಣ ಸೇರಿದಂತೆ ಹಲವರು ಮಾತನಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಡಿತರ ಅಂಗಡಿ ಮಾಲೀಕರಾದ ಆರ್.ಕಾಮರಾಜು, ರಂಗಧಾಮಯ್ಯ, ಹೆಬ್ಬೂರು ಆರ್. ರಂಗಯ್ಯ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.