ಪಾವಗಡ

ತಾಲ್ಲೂಕಿನ ಸಿಕೆ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೊತ್ತೂರು ಗ್ರಾಮದ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕರಿಯಣ್ಣನಕೆರೆ ತುಂಬಿ ಹರಿಯುತ್ತಿದ್ದು ಈ ಕೆರೆಗೆ ಆಂಧ್ರಪ್ರದೇಶದ ಕಾಲುವೆ ನೀರು ಯಥೇಚ್ಛವಾಗಿ ಹರಿಯುತ್ತಿರುವುದರಿಂದ ಎರಡು ಕೊಡಿಗಳಲ್ಲಿಯೂ ಸಹ 3 ರಿಂದ 4 ಅಡಿ ನೀರು ಹರಿಯುತ್ತಿದ್ದು ಸುಮಾರು 8 ರಿಂದ 10 ಹಳ್ಳಿಗಳ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಈ ವೇಳೆ ಕೊತ್ತೂರು ಗ್ರಾಮದ ಮುಖಂಡರಾದ ಕೊಂಡಪ್ಪನವರು ಪತ್ರಿಕೆಯೊಂದಿಗೆ ಪ್ರತಿಕ್ರಿಸುತ್ತಾ , ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾಗೂ ಆಂಧ್ರಪ್ರದೇಶದ ಶಾಶ್ವತ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಿಸಿರುವ ಕಾಲುವೆಯಿಂದ ಯಥೇಚ್ಛವಾಗಿ ಕರಿಯಣ್ಣನ ಕೆರೆಗೆ ಹರಿತಿರುವುದರಿಂದ ಈ ಕೆರೆ ಅಪಾಯದ ಅಂಚಿನಲ್ಲಿದೆ. ಮತ್ತು ಈ ನೀರು ರಸ್ತೆ ಮೇಲೆ ಹರಿಯುವುದರಿಂದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕಡಿತಗೊಂಡಿದ್ದು ಹಿರಿತಿರ್ಪಿ, ದಾಸರಹಳ್ಳಿ ,ಕರೆಕೆರೆ ,ಹೆಚ್ ಗೊಲ್ಲರಹಟ್ಟಿ , ನಾಗೇನಹಳ್ಳಿ, ಮಾರ್ಗವಾಗಿ ಕರ್ನಾಟಕದ ಹಿರಿಯೂರು ಮುಖ್ಯ ರಸ್ತೆಯ ಸಂಪರ್ಕ ಸ್ಥಗಿತಗೊಂಡಿದೆ.
ಗುರುವಾರ ಅಗ್ನಿಶಾಮಕ ದಳ ಈ ಕೆರೆಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲು ಅರಸಹಾಸ ಪಡುವಂತಾಯಿತು. ಇನ್ನೂ ಇದೇ ಗ್ರಾಮಕ್ಕೆ ಸೇರಿದ ದಾಸಪ್ಪನಹಟ್ಟಿ ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಇಲ್ಲಿನ ಕೂಲಿ ಕಾರ್ಮಿಕರ, ಕುರಿಗಾಹಿಗಳ ಹಾಗೂ ರೈತರ ದೈನಂದಿನ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇಂದೇ ಮಳೆ ನಿಂತರೂ ಸಹಾ ಈ ಗ್ರಾಮದ ಜನ ಜೀವನ ಯಥಾಸ್ತುತಿಗೆ ಮರಳಲು ಒಂದು ವಾರ ಬೇಕಾಗುತ್ತದೆ. ಆದ್ದರಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶದ ಸರ್ಕಾರಗಳು ತಕ್ಷಣ ಎಚ್ಚೆತ್ತುಕೊಂಡು ಸಂಬಂಧ ಪಟ್ಟ ಅಧಿಕಾರಿಗಳು ಈ ಕೆರೆಯನ್ನು ಪರಿಶೀಲಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸುಬ್ಬರಾಯ, ರಾಮು, ಶ್ರೀನಿವಾಸ್, ರವಿ , ವಿನಯ್, ಆಂಧ್ರಪ್ರದೇಶದ ವೆಂಕಟರಮಣಪ್ಪ ಉಪಸ್ಥಿತರಿದ್ದರು.

(Visited 2 times, 1 visits today)