ತುಮಕೂರು


ಉತ್ತಮ ಆಡಳಿತ ಸುಸ್ಥಿತಿಯಲ್ಲಿರಲು ಮಾಹಿತಿ ಹಕ್ಕು ಕಾಯ್ದೆ ಜನರಿಗೆ ಸಿಕ್ಕಿರುವ ಪ್ರಮುಖ ಅಸ್ತ್ರ ಎಂದು ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ತಿಳಿಸಿದರು.
ಕನ್ನಡಭವನದಲ್ಲಿ ನಡೆದ ಮಾಹಿತಿ ಹಕ್ಕು ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತದಲ್ಲಿ ಜನರ ಸಹಭಾಗಿತ್ವದಿಂದ ಆಡಳಿತದಲ್ಲಿದ್ದ ಕತ್ತಲನ್ನು ದೂರ ಮಾಡಲು ಮಾಹಿತಿ ಹಕ್ಕು ಕಾರಣವಾಗಿದೆ ಎನ್ನುವುದು ಸತ್ಯ ಎಂದರು.
ಪ್ರಜಾಪ್ರಭುತ್ವದ ಯಶಸ್ವಿಗೊಳಿಸಲು ಜನರ ಸಹಭಾಗಿತ್ವ ಅವಶ್ಯಕ, ಸಹಭಾಗಿತ್ವ ಇಲ್ಲದೇ ಪ್ರಜಾಪ್ರಭುತ್ವ ಯಶಸ್ವಿಯಾಗಿಲ್ಲ ಅದೇ ಕಾರಣಕ್ಕಾಗಿ ಮಾಹಿತಿ ಹಕ್ಕು ಅಧಿನಿಯಮವನ್ನು ಜಾರಿಗೆ ತರಲಾಯಿತು, ಆಡಳಿತದ ಯಂತ್ರ ಪಾರದರ್ಶಕತೆ ಕಾಯ್ದುಕೊಳ್ಳಲು ಮಾಹಿತಿ ಹಕ್ಕು ನೆರವಾಗಿದೆ ಎಂದರು.
ಲೋಕಾಯುಕ್ತ ವಲೀಬಾಷ ಅವರು ಮಾತನಾಡಿ, ಮಾಹಿತಿ ಹಕ್ಕು ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿಯೂ ಅರಿವು ಮೂಡಿಸುವ ಮೂಲಕ ಮಾಹಿತಿ ಹಕ್ಕನ್ನು ಬಲಪಡಿಸಬೇಕು, ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಅರಿವು ಮೂಡಿದಾಗ ಮಾತ್ರ ಪಾರದರ್ಶಕ ಆಡಳಿತ ಸಾಮಾನ್ಯರಿಗೆ ದೊರೆಯಲಿದೆ ಎಂದರು.
ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎನ್ನುವುದನ್ನು ಅರಿಯಬೇಕಿದೆ, ಸಮುದಾಯದಲ್ಲಿ ಅರಿವು ಮೂಡಿಸುವುದರ ಮೂಲಕ ಉತ್ತಮ ವ್ಯವಸ್ಥೆ ತರಬೇಕಿದೆ, ಮಾಹಿತಿ ಹಕ್ಕು ಕಾರ್ಯಕರ್ತರು ನಿಸ್ವಾರ್ಥ ಸೇವೆ ಸಲ್ಲಿಸದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದರು.
ನರೇಗಾ ಯೋಜನೆಯಡಿ ಸಾಕಷ್ಟು ಅವ್ಯವಹಾರವಾಗಿದೆ, ಅನೇಕ ಆಸ್ಪತ್ರೆಗಳಲ್ಲಿ ಕುಂದುಕೊರತೆಗಳಿವೆ ಈ ಬಗ್ಗೆ ಸಾಮಾಜಿಕ, ಮಾಹಿತಿಹಕ್ಕು ಕಾರ್ಯಕರ್ತರು ಲೋಕಾಯುಕ್ತ ದೊಂದಿಗೆ ಕೈ ಜೋಡಿಸುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ರಾಜ್ಯ ಸಾಮಾಜಿಕ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್ ಮಾತನಾಡಿ, ಸರ್ಕಾರದ ಖಜಾನೆಯ ಹಣವನ್ನು ತಡೆಯುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಶ್ರಮ ಹೆಚ್ಚಿದೆ, ಸ್ವಂತ ಹಣ ಖರ್ಚು ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾಯಕವನ್ನು ಮಾಡುತ್ತಿದ್ದಾರೆ ಎಂದರು.
ಇತ್ತಿಚಿನ ದಿನಗಳಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿರುವ ಪ್ರಾಮಾಣಿಕ ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆ ಹಾಕುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ, ಪ್ರಾಮಾಣಿಕ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುವ ಮುನ್ನ ಪರಿಶೀಲನೆ ನಡೆಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಆಳುವ ಸರ್ಕಾರಗಳು ಲಕ್ಷಾಂತರ ಕೋಟಿ ಅನುದಾನದ ಬಜೆಟ್ ಮಂಡನೆ ಮಾಡಲಾಗುತ್ತದೆ ಆದರೆ ಜನ ಸಾಮಾನ್ಯರ ಸಮಸ್ಯೆ ಬದಲಾವಣೆಯಾಗಿಲ್ಲ, ಐನೂರು ರೂಪಾಯಿ ಕೊಟ್ಟರೆ ಎರಡು ತಿಂಗಳು ದೂರವಾಣಿ ಮಾಡಬಹುದು ಆದರೆ ರಾಜಕಾರಣಿಗಳ ದೂರವಾಣಿ ಬಿಲ್ ಇಪ್ಪತ್ತು ಸಾವಿರ ಏಕೆ ಹೀಗೆ? ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಿದೆ ಎಂದರು.
ಪ್ರಾಮಾಣಿಕವಾಗಿ ಕೆಲಸ ಮಾಡುವ ಮಾಹಿತಿ ಹಕ್ಕು ಕಾರ್ಯಕರ್ತರು ಕಾರ್ಯಾಂಗವೇ ಪೆÇೀಷಿಸುತ್ತಿರುವ ಕಾರ್ಯಕರ್ತರ ವಿರುದ್ಧ ಹೋರಾಟ ಮಾಡಬೇಕಿದೆ, ಸಾಮಾಜಿಕ ಹೋರಾಟವನ್ನು ಬದಿಗೊತ್ತಿ ವೃತ್ತಿ ಮಾಡಿಕೊಂಡಿದ್ದಾರೆ, ಇಂತಹವರ
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ ವಾರಸುದಾರರು ಇಲ್ಲದೆ ದೇಶದಲ್ಲಿ ದಿನಾಚರಣೆ ನಡೆಯುವುದಿಲ್ಲ, ಮಾಹಿತಿ ಹಕ್ಕು ಕಾಯ್ದೆ ವಾರಸುದಾರರಾಗಿರುವ ಮಾಹಿತಿ ಹಕ್ಕು ಕಾರ್ಯಕರ್ತರು 17 ವರ್ಷಗಳ ನಂತರ ಇಂತಹ ದಿನಾಚರಣೆಯನ್ನು ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಮಾಹಿತಿ ಹಕ್ಕು ಕಾಯ್ದೆ ದೇಶದಲ್ಲಿ ಅತಿ ಹೆಚ್ಚು ಚರ್ಚಿತವಾಗಿರುವ ಕಾಯ್ದೆ, ಮಾಹಿತಿ ಹಕ್ಕು ಕಾರ್ಯಕರ್ತರು ಅನೇಕರಿಗೆ ಸಿಂಹಸ್ವಪ್ನವಾಗಿದ್ದಾರೆ, ಭ್ರಷ್ಟರಿಗೆ ನಡುಕ ಹುಟ್ಟಿಸುವಂತಿರುವ ಕಾನೂನುಗಳನ್ನು ಪರಿಣಾಮಕಾರಿಯಾಗಿಸುತ್ತಿರುವುದು ಮಾಹಿತಿ ಹಕ್ಕು ಕಾರ್ಯಕರ್ತರು ಎಂದು ಹೇಳಿದರು.
ದೇಶದಲ್ಲಿ ಮಾಹಿತಿ ಸೋರಿಕೆಯಾಗುತ್ತಲೇ ಇರುತ್ತದೆ ಅದನ್ನು ಕಾನೂನು ಬದ್ಧವಾಗಿ ಪಡೆದು ಅವರಿಗೆ ಶಿಕ್ಷೆ ಕೊಡಿಸುವಂತಹ ಕೆಲಸ ಮಾಡಲು ಇಂತಹದ್ದೇ ವೃತ್ತಿಯಲ್ಲಿರಬೇಕು ಎಂಬ ಉದ್ದೇಶವಿಲ್ಲ, ಸದುದ್ದೇಶದಿಂದ ಮಾಹಿತಿ ಪಡೆದು, ಸಮಾಜದ ಬದಲಾವಣೆಗೆ ನಿಸ್ಪೃಹವಾಗಿ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಸಮಾಜದ ಅಭಿವೃದ್ಧಿ ಶ್ರಮಿಸಿದ ಚನ್ನಯ್ಯ ವಸ್ತ್ರದ್, ರುದ್ರೇಶ್, ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಬಿ.ಎಚ್. ವೀರೇಶ್, ಸಂಘಟನೆಯ ಮೋಹನ್ ಕುಮಾರ್, ಹಳ್ಳಿ ಮಕ್ಕಳ ಸಂಘದ ಕೋವಿ ನಾಗೇಶ್ವರರಾವ್, ಜಿಲ್ಲಾಧ್ಯಕ್ಷ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಕುಣಿಹಳ್ಳಿ ಆರ್ ಮಂಜುನಾಥ್ ಶಿವಶಂಕರ್, ಚೆನ್ನಯ್ಯ ವಸ್ತ್ರದ್, ಅಪ್ಪಾಜಿಗೌಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಾಹಿತಿ ಹಕ್ಕು ಕಾರ್ಯಕರ್ತರು ಭಾಗವಹಿಸಿದ್ದರು.

(Visited 1 times, 1 visits today)