ತುಮಕೂರು
ರಾಜ್ಯ ಸರ್ಕಾರ ಎಸ್ಸಿ-ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿ ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ ಸಮುದಾಯಗಳ ಒಕ್ಕೂಟದ ವತಿಯಿಂದ ನಗರದ ಟೌನ್ ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಸಮುದಾಯದ ಮುಖಂಡ ಕುಪ್ಪೂರು ಶ್ರೀಧರನಾಯಕ ಮಾತನಾಡಿ, ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ 40 ವರ್ಷದಿಂದ ಹೋರಾಟ ನಡೆಸುತ್ತಿದ್ದೆವು. ಇದಕ್ಕೆ ಪೂರಕವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಹೋರಾಟ ಮಾಡುತ್ತಿದ್ದರು. ಈ ಎಲ್ಲ ಹೋರಾಟಗಳಿಂದ ಸರ್ಕಾರ ಎಚ್ಚೆತ್ತುಕೊಂಡು ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದು ನಮಗೆಲ್ಲ ಸಂತಸ ತಂದಿದೆ ಎಂದರು.
ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸಂಬಂಧಿಸಿದಂತೆ ನಕಲಿ ಪ್ರಮಾಣ ಪತ್ರ ಹಾವಳಿ ತಡೆಯುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮೀಸಲಾತಿ ಹೆಚ್ಚಳ ಮಾಡಿದ ಸರ್ಕಾರಕ್ಕೆ ಹಾಗೂ ಹೋರಾಟ ಮಾಡಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ ನಿರಂತರ 257 ದಿನಗಳ ಧರಣಿ ಸತ್ಯಾಗ್ರಹದ ಫಲವಾಗಿ ಹಾಗೂ ಈ ಹಿಂದೆ ಶ್ರಮಿಸಿದ ಹಲವಾರು ಸಂಘ ಸಂಸ್ಥೆಗಳ ಹೋರಾಟಗಾರರ ಹೋರಾಟದ ಫಲವಾಗಿ ಇಂದು ಜಸ್ಟಿಸ್ ನಾಗಮೋಹನ್ ದಾಸ್ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳದ ವರದಿಯನ್ನು ಇಂದು ಸರ್ಕಾರ ಯಥಾವತ್ತಾಗಿ ಎತ್ತಿ ಹಿಡಿದು ಸುಗ್ರೀವಾಜ್ಞೆ ಹೊರಡಿಸಿರುವುದು ಎಸ್ಸಿ ಎಸ್ಟಿ ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಗುವ ಭರವಸೆಯಿಂದ ಎಸ್ಸಿ ಎಸ್ಟಿ ಸಮುದಾಯಗಳಲ್ಲಿ ಸಂತಸ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಮರಳೂರು ನಾಗರಾಜ್, ಬಂಡೆ ಕುಮಾರ್, ಮಾರಣ್ಣ ಪಾಳೇಗಾರ, ಕುಪ್ಪೂರು ಶ್ರೀಧರ್ ನಾಯಕ, ರಂಗನಾಥ್, ಪ್ರಕಾಶ್ , ಭರತ್ ರಾಜ್, ಅರುಣ್ ಕುಮಾರ್, ಗೂಳೂರು ರಾಜಣ್ಣ, ಗೋಪಾಲ್, ರಂಜನ್ ಕುಮಾರ್,ಶಂಕರಪ್ಪ, ರಾಜಣ್ಣ, ನರಸಿಂಹ ಮೂರ್ತಿ, ಮೋಹನ್ ಮತ್ತಿತರರು ಭಾಗವಹಿಸಿದ್ದರು.