ತುಮಕೂರು
ಕೋಟಿ ಕಂಠ ಗಾಯನ ಕಾರ್ಯಕ್ರಮ ವಿನೂತನ ಪ್ರಯೋಗವಾಗಿದ್ದು, ಇದೊಂದು ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಕಾರಿ ಮೈಲಿಗಲ್ಲಾಗಿದೆ ಎಂದು ರಾಜ್ಯ ಸರ್ಕಾರಿ
ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಚೇತನ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ಜಿಲ್ಲಾಸ್ಪತ್ರೆ, ಸ್ವರಸಿಂಚನ ಸುಗಮ ಸಂಗೀತ ಜಾನಪದ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು-ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕೋಟಿ ಕಂಠ ಗಾಯನದ ಪ್ರಯುಕ್ತ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋಟಿ ಕಂಠ ಗಾಯನ ಕಾರ್ಯಕ್ರಮದಂತಹ ವೇದಿಕೆಗಳ ಮೂಲಕ ಸಾವಿರಾರು ಪ್ರತಿಭಟನೆ ಹೊರಹೊಮ್ಮುತ್ತಾರೆ. ಈ ಕೋಟಿ ಕಂಠ ಗಾಯನ ಸಂಗೀತ ಪ್ರತಿಭೆಗಳಿಗೂ ಅತ್ಯಂತ ಉಪಯುಕ್ತವಾಗಿದೆ ಎಂದರು.
ಸಂಗೀತ ಎಂಬುದು ನಮ್ಮ ನಾಡು, ಸಂಸ್ಕೃತಿಯಲ್ಲಿ ಬಂದಿರುವಂತಹ ಕಲೆ. ನಮಗೆ ಪ್ರತಿನಿತ್ಯ ಗಾಳಿ, ನೀರು, ನಿದ್ದೆ ಯಾವ ರೀತಿ ಅವಶ್ಯಕತೆ ಇದೆಯೋ ಅದೇ ರೀತಿ ಸಂಗೀತವೂ ಅಗತ್ಯವಾಗಿದೆ ಎಂದ ಅವರು, ಸಂಗೀತ ಮಾನಸಿಕವಾಗಿ ಶಕ್ತಿ ತುಂಬುವುದರ ಜತೆಗೆ ಹೃದಯವಂತಿಕೆಯನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ನಮ್ಮ ಹೃದಯ, ಮೆದುಳಿನ ಕಾರ್ಯಗಳು ಅತ್ಯಂತ ಕ್ರಿಯಾಶೀಲವಾಗಲು ಸಂಗೀತ ಸಹಕಾರಿ. ಹಾಗಾಗಿ ಪ್ರತಿಯೊಬ್ಬರೂ ಸಂಗೀತವನ್ನು ಕೇಳಿ ಆನಂದಿಸುವುದರ ಜತೆಗೆ ಪ್ರತಿಭೆಗಳನ್ನು ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಸಣ್ಣ ಮಗುವಿನ ಮುಂದೆಯೂ ಸುಶ್ರಾವ್ಯವಾದ ಸಂಗೀತ ಹಾಕಿದರೆ ಆ ಮಗುವೂ ತಲೆದೂಗುತ್ತದೆ. ಇಂತಹ ಸಂಗೀತಕ್ಕೆ ಮಾರು ಹೋಗದವರೇ ಇಲ್ಲ ಎಂದು ಅವರು ತಿಳಿಸಿದರು.
ಮಾನಸಿಕವಾಗಿ ಖಿನ್ನತೆಗೆ ಒಳಗಾದವರಿಗೂ ಸಂಗೀತ ಚೈತನ್ಯ ನೀಡುತ್ತದೆ. ಸಂಗೀತಕ್ಕೆ ಸಾಕಷ್ಟು ಸಾಹಿತ್ಯ ಬೇಕು. ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಕಲುಷಿತಗೊಳ್ಳುತ್ತಿರುವ ಮನಸ್ಸುಗಳಿಗೆ ಮುದ ನೀಡಲಿದೆ ಎಂದರು.
ಸ್ವರಸಿಂಚನ ಸಂಗೀತ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ಮನುಷ್ಯನಿಗೆ ಸಂಗೀತದಿಂದ ನೆಮ್ಮದಿ ಸಿಗುತ್ತದೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳನ್ನು ಆರೈಕೆ ಮಾಡುವುದರಿಂದಲೂ ನೆಮ್ಮದಿ ದೊರೆಯುತ್ತದೆ ಎಂದರು.
ಕಳೆದ ಬಾರಿ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ತುಮಕೂರು ನಂ. 1 ಸ್ಥಾನ ಪಡೆದಿತ್ತು. ಅಲ್ಲದೆ ಕಳೆದ ವರ್ಷ 16 ವೇದಿಕೆಗಳಲ್ಲಿ ಕಾರ್ಯಕ್ರಮ ನಡೆದಿತ್ತು. ಆದರೆ ಈ ಬಾರಿ 60-70 ವೇದಿಕೆಗಳು ಸಿಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಚೇತನ್, ಗಾಯಕ ಮಲ್ಲಿಕಾರ್ಜುನ ಕೆಂಕೆರೆ, ನೇತ್ರತಜ್ಞ ಡಾ. ದಿನೇಶ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್, ಎಸ್.ಪಿ. ಗಂಗಮ್ಮ, ಉಪಪ್ರಾಂಶುಪಾಲರಾದ ಹೆಚ್.ಎಸ್. ಚಂದ್ರಕಲಾ, ಲಕ್ಷ್ಮಮ್ಮ, ಚಿಕ್ಕಹನುಮಂತಯ್ಯ, ಮಮತಾ, ಆಶಾರಾಣಿ, ರೂಪ, ಧನಲಕ್ಷ್ಮಿ, ವಿನುತ್ ಮತ್ತಿತರರು ಉಪಸ್ಥಿತರಿದ್ದರು.