ತುಮಕೂರು


ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 11ರಂದು ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೃತ್ತಿಕೆ ಸಂಗ್ರಹಿಸಲು ಹಮ್ಮಿಕೊಂಡಿರುವ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದಡಿ ಈಗಾಗಲೇ ಅಕ್ಟೋಬರ್ 23 ರಿಂದ 2 ವಾಹನಗಳು ನಿಗಧಿಪಡಿಸಿದ ಮಾರ್ಗನಕ್ಷೆ ಪ್ರಕಾರ ಎಲ್ಲ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಮೃತ್ತಿಕೆ ಸಂಗ್ರಹಿಸಲಿವೆ.
ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಮೃತ್ತಿಕೆ ಸಂಗ್ರಹ ಕಾರ್ಯವು ನವೆಂಬರ್ 7ಕ್ಕೆ ಪೂರ್ಣಗೊಂಡು ವಾಹನಗಳು ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಲಿದ್ದು, ನವೆಂಬರ್ 8ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ವಾಹನಗಳಿಗೆ ಪೂಜೆ ಸಲ್ಲಿಸಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೌರವದಿಂದ ಬೀಳ್ಕೊಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಚಿವರುಗಳಾದ ಆರ್. ಅಶೋಕ್, ಸಿ.ಎನ್. ಅಶ್ವಥ್ ನಾರಾಯಣ್, ಮುನಿರತ್ನ, ಎಸ್.ಟಿ. ಸೋಮಶೇಖರ್, ನಾರಾಯಣ ಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡೀಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಬಗ್ಗೆ ಮಾಹಿತಿ ನೀಡುತ್ತಾ, ಮೃತ್ತಿಕೆ ಸಂಗ್ರಹಿಸಲು ಅಕ್ಟೋಬರ್ 23ರಂದು ಜಿಲ್ಲೆಯ ತುಮಕೂರು, ಮಧುಗಿರಿ, ಪಾವಗಡ, ಕೊರಟಗೆರೆ, ಶಿರಾ ತಾಲ್ಲೂಕುಗಳಿಗೆ 1 ಹಾಗೂ ಅಕ್ಟೋಬರ್ 24ರಂದು ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಕುಣಿಗಲ್, ಗುಬ್ಬಿ ತಾಲ್ಲೂಕುಗಳಿಗೆ 1 ಸೇರಿದಂತೆ ಒಟ್ಟು 2 ವಾಹನಗಳನ್ನು ಮೃತ್ತಿಕೆ ಸಂಗ್ರಹಿಸಲು ನಿಯೋಜಿಸಲಾಗಿದೆ. ಮಾರ್ಗ ನಕ್ಷೆ ಪ್ರಕಾರ ಪಂಚಾಯ್ತಿವಾರು ಎಲ್ಲ ಗ್ರಾಮಗಳಿಂದ ಮಣ್ಣು ಸಂಗ್ರಹಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಾರ್ಗನಕ್ಷೆಯಲ್ಲಿ ಗ್ರಾಮ ಪಂಚಾಯ್ತಿಯ ಐತಿಹಾಸಿಕ, ಪಾರಂಪರಿಕ, ಧಾರ್ಮಿಕ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಸ್ಥಳೀಯ ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳನ್ನು ಒಳಪಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ತುಮಕೂರು ನಗರ, ತುಮಕೂರು ಗ್ರಾಮಾಂತರ, ತಿಪಟೂರು, ಕುಣಿಗಲ್ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಮೃತ್ತಿಕೆಯನ್ನು ಸಂಗ್ರಹಿಸಲಾಗಿದೆ. ಈ ಮೃತ್ತಿಕೆ ಸಂಗ್ರಹ ಕಾರ್ಯದಲ್ಲಿ ಸ್ಥಳೀಯ ಸಂಸದ ಜಿ.ಎಸ್. ಬಸವರಾಜು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ವಿ. ಅಜಯ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ ಸೇರಿದಂತೆ ಮತ್ತಿತರ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.

(Visited 1 times, 1 visits today)