ತುಮಕೂರು
ವಿದ್ಯಾರ್ಥಿಗಳು ಹಾಗೂ ಪುಸ್ತಕ ಪ್ರಿಯರ ದೂರಿನ ಹಿನ್ನೆಲೆಯಲ್ಲಿ ಬುಧವಾರ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಪ್ರಭಾವತಿ ಎಂ.ಸುಧೀಶ್ವರ್,ಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್ ಹಾಗೂ ಸ್ಥಾಯಿ ಸಮಿತಿ ಸದಸ್ಯ ಸೈಯದ್ ನಯಾಜ್ ಅವರುಗಳು ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ನಗರದ ಟೌನ್‍ಹಾಲ್ ಸರ್ಕಲ್‍ನಲ್ಲಿರುವ ಕೇಂದ್ರ
ಗ್ರಂಥಾಲಯದ ವಾಚನಾಲಯ, ಪುಸ್ತಕಗಳ ವಿಭಾಗ ಹಾಗೂ ಇನ್ನಿತರ ವಿಭಾಗಗಳು ಸರಕಾರಿ ರಜಾದಿನಗಳಲ್ಲಿ ತೆರೆಯದೆ ಇರುವ ಕಾರಣ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ವಿವಿಧ ಪುಸ್ತಕಗಳನ್ನು ಒದಲು ತೊಂದರೆಯಾಗುತ್ತಿದೆ.ಅದರಲ್ಲಿಯೂ ಅಕ್ಟೋಬರ್ ತಿಂಗಳಲ್ಲಿ ಸಾಲು,ಸಾಲು ರಜೆಗಳು ಬಂದಿರುವ ಕಾರಣ,ನಿರಂತರವಾಗಿ ಓದುತ್ತಿರುವ ವಿವಿಧ ಪರೀಕ್ಷಾರ್ಥಿಗಳು,ಪುಸ್ತಕ ಪ್ರಿಯರಿಗೆ ತೊಂದರೆಯಾಗುತ್ತಿದೆ.ಕೇಂದ್ರ ಗ್ರಂಥಾಲಯ ಸಮಿತಿಯ ಅಧ್ಯಕ್ಷರು ಆಗಿರುವ ಮೇಯರ್ ಅವರು,ಗ್ರಂಥಾಲಯದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ,ರಜಾ ದಿನಗಳಲ್ಲಿಯೂ ಗ್ರಂಥಾಲಯದ ಬಾಗಿಲು ತೆರೆದು ಒದುಗರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು.
ಸದರಿ ಮನವಿಯ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ್ದ ಮೇಯರ್ ಪ್ರಭಾವತಿ ಎಂ.ಸುಧೀಶ್ವರ್, ವಿರೋಧಪಕ್ಷದ ನಾಯಕ ಜೆ.ಕುಮಾರ್ ಹಾಗೂ ಸದಸ್ಯ ಸೈಯದ್ ನಯಾಜ್ ಅವರುಗಳು
ಗ್ರಂಥಾಲಯದ ಅಧಿಕಾರಿ ಬಸವರಾಜು ಹಾಗೂ ಸಿಬ್ಬಂದಿ ವರ್ಗದವರನ್ನು ಭೇಟಿಯಾಗಿ,ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದ್ದೇ ಅಲ್ಲದೆ,ರಜಾದಿನಗಳಲ್ಲಿ ಬಾಗಿಲು ತೆರೆದು ಓದಲು ಅವಕಾಶ ಕಲ್ಪಿಸುವಂತೆ ಸೂಚಿಸಿದರಲ್ಲದೆ, ಗ್ರಂಥಾಲಯಗಳಿಗೆ ಅಗತ್ಯವಿರುವ ಕುಡಿಯುವ ನೀರು,ವಾಹನ ನಿಲುಗಡೆ ಮತ್ತಿತರರ ವಿಚಾರಗಳ ಕುರಿತು ಶೀಘ್ರದಲ್ಲಿಯೇ ಪ್ರತ್ಯೇಕ ಸಭೆ ಕರೆದು ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತುಮಕೂರು ಗ್ರಂಥಾಲಯದಲ್ಲಿ ಪೊಲೀಸ್,ಐಬಿಪಿಎಸ್,ಎಸ್.ಎಸ್‍ಸಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಿರುವ ನೂರಾರು ಜನರು ದಿನನಿತ್ಯ ದಿನಪತ್ರಿಕೆ, ವೃತ್ತಪತ್ರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳನ್ನು ಓದುತ್ತಿದ್ದು, ಹಬ್ಬ ಹರಿ ದಿನಗಳಲ್ಲಿ ರಜೆ ಮಾಡುವುದರಿಂದ ನಿರಂತರ ಓದಿಗೆ ತೀವ್ರ ತೊಂದರೆಯಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಮನವಿಯಾಗಿತ್ತು.