ತುಮಕೂರು
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿರುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಎಸ್ಸಿ ಘಟಕ ಹಾಗೂ ಮುಂಚೂಣಿ ಘಟಕಗಳ ಸಹಯೋಗದೊಂದಿಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ನಿಷ್ಠರಾಗಿ ಶ್ರಮಿಸಿದರೆ ಯಾವ ಹಂತದವರೆಗಾದರೂ ಬೆಳೆಯಬಹುದು ಎಂಬುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರೇ ಸಾಕ್ಷಿ ಎಂದರು.
ಹಿರಿಯ ಮುತ್ಸದ್ದಿತನ ಮತ್ತು ಜನಪರ ಕಾಳಜಿಯ ಮೇರು ವ್ಯಕ್ತಿತ್ವದ ಖರ್ಗೆಯವರು ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಕರುನಾಡಿನ ನಾಯಕರೊಬ್ಬರು ಪಕ್ಷದ ಉನ್ನತ ಹುದ್ದೆ ಅಲಂಕರಿಸಿದ್ದು ನಮಗೆ ಸಂತಸ ತಂದಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು 1968ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಮೂಲಕ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸಾರಥ್ಯ ವಹಿಸಿದ ರಾಜ್ಯದ ಮೊದಲ ನಾಯಕರಾಗಿ ಗುರುತಿಸಿಕೊಂಡಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವ ಮೂಲಕ ರಾಜ್ಯದ ಎರಡನೇ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.
ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಜಿ.ನಿಂಗರಾಜು ಮಾತನಾಡಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು
ಆಯ್ಕೆಯಾಗಿರುವುದರಿಂದ ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ನಮ್ಮ ರಾಷ್ಟ್ರ ಜಾತ್ಯಾತೀತ ರಾಷ್ಟ್ರ, ಈ ಜಾತ್ಯಾತೀತ ರಾಷ್ಟ್ರದಲ್ಲಿರುವ ನಾವೆಲ್ಲರೂ ಸಹ ಒಕ್ಕೊರಲಿನಿಂದ ಎಲ್ಲಾ ಜನಾಂಗವನ್ನು ಒಗ್ಗೂಡಿಸಿಕೊಂಡು ಮುಂಚೂಣಿ ಘಟಕಗಳ ಸಹಭಾಗಿತ್ವದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ನೀಡಿದ್ದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಸಂಭ್ರಮಾಚರಣೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆಂಚರಾಮಯ್ಯ, ಮುಖಂಡರಾದ ರೆಡ್ಡಿ ಚಿನ್ನಯಲ್ಲಪ್ಪ, ನಯಾಜ್, ಇಕ್ಬಾಲ್ ಅಹಮದ್, ನರಸೀಯಪ್ಪ, ಸಿದ್ಧಲಿಂಗೇಗೌಡ, ಫರ್ಹಾನಾ ಬೇಗಂ, ಚಂದ್ರಶೇಖರ್, ಮಂಜುನಾಥ್, ಗುರುಪ್ರಸಾದ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.