ಮಧುಗಿರಿ
ತಾಲೂಕಿಗೆ ಆಗಮಿಸುತ್ತಿರುವ ಕೆಂಪೇಗೌಡ
ರಥಯಾತ್ರೆಗೆ ಜನತೆ ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಪೀಣ್ಯ ದಾಸರಹಳ್ಳಿ ಜೆಡಿಎಸ್ ಕಾರ್ಯಾಧ್ಯಕ್ಷ ಮುನೇಗೌಡ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೆಂಪೇಗೌಡರು ಸರ್ವ ಧರ್ಮ ಸಹಿಷ್ಣುರಾಗಿದ್ದು, ನಾಡಿನ ಹೆಮ್ಮೆಯಾಗಿದ್ದಾರೆ. ಇಂತಹ ಮಹಟಿನೀಯರ ರಥಯಾತ್ರೆ ತಾಲೂಕಿಗೆ ಆಗಮಿಸುತ್ತುರುವುದು ನಮ್ಮ ಸುದೈವ. ಇಂತಹ ಅವಕಾಶ ಮತ್ತೆ ಬರುವುದಿಲ್ಲ. ಆದ್ದರಿಂದ ಈ ರಥ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಬೇಕು. ರಥಯಾತ್ರೆ ಯಶಸ್ವಿಗೊಳಿಸುವ ಉದ್ದೇಶದಿಂದ ಕುಂಚಿಟಿಗ ವಕ್ಕಲಿಗರ ಸಂಘದ ಮೂಲಕ ಕೆಂಪೇಗೌಡರ ರಥಯಾತ್ರೆಗೆ ವೈಯಕ್ತಿಕವಾಗಿ 5 ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಲಾಗಿದೆ ಎಂದರು.
ಬೆಂಗಳೂರಿನ ಬಾಗಲಗುಂಟೆ ಯ ಸುತ್ತಮುತ್ತ ಮಧುಗಿರಿ ತಾಲೂಕಿನ 17 ಸಾವಿರ ಮತದಾರರಿದ್ದು, ಈ ಭಾಗ ಮಿನಿ ಮಧುಗಿರಿಯಾಗಿದ್ದು, ಅವರ ಕಷ್ಟ ಸುಖಕ್ಕೆ ಸ್ಪಂದಿಸಿದ್ದು, ಅವರ ಮತ್ತು ಇಲ್ಲಿನ ಕುಂಚಿಟಿಗ ವಕ್ಕಲಿಗರ ಸಂಘದವರ ಆಹ್ವಾನದ ಮೇರೆಗೆ
ಈ ರಥಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ ಎಂದರು.
ನೀವು ಜೆಡಿಎಸ್ ಪಕ್ಷದಿಂದ ಮಧುಗಿರಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಶಕ್ತಿ ತುಂಬುವ ಉದ್ದೇಶದಿಂದ ಕಾರ್ಯಕರ್ತರ ಮನೆಗಳಿಗೆ ಬೇಟಿ ನೀಡಿದ್ದು, ಸ್ಥಳೀಯ ಶಾಸಕ ಎಂ.ವಿ. ವೀರಭದ್ರಯ್ಯ ಕ್ಷೇತ್ರದ ಜೆಡಿಎಸ್ ಪಕ್ಷದ ಸರ್ವೋಚ್ಚ ನಾಯಕರಾಗಿದ್ದು, ಸ್ವತಃ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರೂ ಸಹ ಪಕ್ಷದ ವರಿಷ್ಠರು ಅವರ ಮನವೊಲಿಸಿದ್ದಾರೆ.
ಆದರೆ ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ದನಾಗಿದ್ದು, ಯಾವುದೇ ಕ್ಷೇತ್ರದ ಚುನಾವಣಾ ಜವಾಬ್ದಾರಿ ನೀಡಿದರೂ ನಿಬಾಯಿಸುತ್ತೇನೆ. ನಮ್ಮ ಗುರಿ ಕುಮಾರಸ್ವಾಮಿ ಮುಂದಿನ ಸಿಎಂ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಕುಂಚಿಟಿಗ ವಕ್ಕಲಿಗರ ಸಂಘದ ನಿರ್ದೇಶಕ ಮೋಹನ್, ಪುರಸಭೆ ಮಾಜಿ ಸದಸ್ಯ ಶಫೀಕ್, ಕಾರ್ಪೇನಹಳ್ಳಿ ನವೀನ್, ಪೀಣ್ಯ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಚರಣ್ ಗೌಡ ಇತರರು ಇದ್ದರು.