ತುಮಕೂರು


ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿರಿಸಿ ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮಾಡಬೇಕೆಂದು ಉಪವಿಭಾಗಾಧಿಕಾರಿ ವಿ. ಅಜಯ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿಂದು ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಭುವನೇಶ್ವರಿ ದೇವಿ ಪ್ರತಿಮೆಯನ್ನಿರಿಸುವ ಬೆಳ್ಳಿ ರಥ ವಾಹನವನ್ನು
ತಳಿರು-ತೋರಣ-ಹೂವಿನಿಂದ ಸಿಂಗರಿಸಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ವಿವಿಧ ಇಲಾಖೆಗಳ ಸ್ತಬ್ದಚಿತ್ರಗಳನ್ನು ಉತ್ತಮವಾಗಿ ರೂಪಿಸಿ ನವೆಂಬರ್ 1ರ ಬೆಳಿಗ್ಗೆ 7.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸಿದ್ಧರಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೆರವಣಿಗೆಯು ನವೆಂಬರ್ 1ರ ಬೆಳಿಗ್ಗೆ 9 ಗಂಟೆಯೊಳಗೆ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನವನ್ನು ಸೇರಬೇಕು. ಮೈದಾನ ಸೇರಿದ ನಂತರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಿಸಿ ಗೌರವರಕ್ಷೆ ಸ್ವೀಕರಿಸಲಿದ್ದಾರೆ. ನಂತರ ಸಚಿವರು ಜಿಲ್ಲೆಯ ಜನತೆಯನ್ನುದ್ದೇಶಿಸಿ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಲೋಪದೋಷಗಳುಂಟಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ಸೂಚಿಸಿದರು.
ಧ್ವಜಾರೋಹಣ ಕಾರ್ಯಕ್ರಮಕ್ಕೆ ಅಗತ್ಯವಾದ ವೇದಿಕೆ ಸಿದ್ಧತೆ, ಅಲಂಕಾರಿಕ ಹೂ ಕುಂಡಗಳ ವ್ಯವಸ್ಥೆ, ಧ್ವಜಸ್ತಂಭ, ನಾಡಗೀತೆ ಗಾಯನ, ಮತ್ತಿತರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರಲ್ಲದೆ, ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಎರಡು ದಿನಗಳ ಕಾಲ ಮಹಾನಗರಪಾಲಿಕೆ ಕಚೇರಿ ಮುಂಭಾಗದಲ್ಲಿ ಹೂವಿನಿಂದ ಅಲಂಕರಿಸಿದ ಕಮಾನು, ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಮೇಯರ್, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಕನ್ನಡ ಪರ ಹೋರಾಟಗಾರರು, ಸಾಹಿತಿ, ಕಲಾವಿದರು, ಗಣ್ಯರಿಗೆ ಆಹ್ವಾನ ಪತ್ರಿಕೆಗಳನ್ನು ತಲುಪಿಸಬೇಕು ಎಂದು ತಿಳಿಸಿದರು.
ಧ್ವಜಾರೋಹಣದ ನಂತರ ಸಾಂಸ್ಕøತಿಕ ಕಾರ್ಯಕ್ರಮ ನೀಡಲು ಸಿದ್ಧಪಡಿಸಿ ಕೊಂಡಿರುವ ಮಕ್ಕಳ ತಂಡಗಳಿಗೆ ಅಗತ್ಯ ತಾಲೀಮು ನೀಡಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯೋತ್ಸವ ಅಂಗವಾಗಿ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿ ಸಂಜೆ 4 ಗಂಟೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಧ್ವಜಾರೋಹಣ ಕಾರ್ಯಕ್ರಮ ಮತ್ತು ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸಿಹಿ ತಿಂಡಿ ಹಾಗೂ ಉಪಹಾರ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರಲ್ಲದೆ, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು, ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಪ್ಪದೇ ಹಾಜರಾಗಬೇಕು ಎಂದು ತಿಳಿಸಿದರು.
ಧ್ವಜಾರೋಹಣ ನಡೆಯಲಿರುವ ಮೈದಾನದಲ್ಲಿ ಸುಸಜ್ಜಿತ ಆಂಬುಲೆನ್ಸ್ ವಾಹನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆರೋಗ್ಯ ಇಲಾಖೆ ಹಾಗೂ ಪಾಲಿಕೆ
ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ಡಿವೈಎಸ್‍ಪಿ ಪರಮೇಶ್, ತಹಶೀಲ್ದಾರ್ ಮೋಹನ್ ಕುಮಾರ್, ಪಾಲಿಕೆ ಆರೋಗ್ಯಾಧಿಕಾರಿ ಡಾ: ರಕ್ಷಿತ್, ಮತ್ತಿತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

(Visited 2 times, 1 visits today)