ತುಮಕೂರು
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಸಮಾಜದಲ್ಲಿ ಗೌರವಯುತ ಬದುಕು ದೊರೆಯಬೇಕು. ನಿವೃತ್ತ ಪೊಲೀಸ್ ಸಿಬ್ಬಂದಿ ಪೊಲೀಸ್ ಠಾಣೆಗೆ ಬಂದರೆ ಅವರ ಗೌರವಕ್ಕೆ ಧಕ್ಕೆ ಆಗದಂತೆ ನಡೆಸಿಕೊಳ್ಳಬೇಕು ಎಂದು ಎಲ್ಲಾ ಸಿಬ್ಬಂದಿಗೂ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರವಾಡ ಹೇಳಿದರು.
ಶನಿವಾರ ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಜನ ಪೊಲೀಸರ ವಿರುದ್ಧ ಮಾತನಾಡಲು ಶುರು ಮಾಡಿದ್ದಾರೆ. ಇಲಾಖೆಯ ಕರ್ತವ್ಯದ ಅನುಭವ, ಕಾರ್ಯವೈಖರಿ, ಮೌಲ್ಯದ ಬಗ್ಗೆ ಅಂತಹವರಿಗೆ ಇರುವ ತಪ್ಪು ಕಲ್ಪನೆ ನಿವಾರಿಸಿ ತಿಳುವಳಿಕೆ ನೀಡುವ ಮೂಲಕ ಪೊಲೀಸ್ ಇಲಾಖೆಯ ಘನತೆ ಎತ್ತಿಹಿಡಿಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮನವಿ ಮೇರೆಗೆ ನಗರದ ಪೊಲೀಸ್ ಹುತಾತ್ಮ ಸ್ಮಾರಕದ ಹಿಂಭಾಗದಲ್ಲಿರುವ ನಿವೇಶನವನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ನಿಮಾಣಕ್ಕಾಗಿ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಎಸ್ಪಿ ಕಚೇರಿವತಿಯಿಂದ ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.
ಸಂಘದ ಅಧ್ಯಕ್ಷ ಎಲ್.ಜಗದೀಶ್ ಮಾತನಾಡಿ, ಸಂಘದಲ್ಲಿ 809 ಮಂದಿ ನಿವೃತ್ತ ಪೊಲೀಸರು ಸದಸ್ಯರಿದ್ದಾರೆ. ಇವರಲ್ಲಿ 512 ಮಂದಿ ಆರೋಗ್ಯ ಯೋಜನೆ ಸದಸ್ಯತ್ವ ಪಡೆದಿದ್ದಾರೆ. ಉಳಿದವರೂ ಸದಸ್ಯತ್ವ ಪಡೆದು ಯೋಜನೆಯ ಪ್ರಯೋಜನ ಪಡೆಯುವಂತೆ ಕೋರಿದರು.
ಸಂಘದಿಂದ ಪೊಲೀಸ್ ಫಾರ್ಮಾ ನಡೆಸಲಾಗುತ್ತಿದೆ. ನಿವೃತ್ತ ಪೊಲೀಸರಿಗೆ ಶೇಕಡ 20ರಷ್ಟು ರಿಯಾಯಿತಿ ದರದಲ್ಲಿ ಔಷಧಿ, ಮಾತ್ರೆ ನೀಡಲಾಗುತ್ತಿದೆ ಎಂದ ಅವರು, ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಪೊಲೀಸ್ ಹುತಾತ್ಮ ಸ್ಮಾರಕ ಹಿಂಭಾಗದಲ್ಲಿರುವ ನಿವೇಶನವನ್ನು ನೀಡಬೇಕು ಎಂದು ವಿನಂತಿಸಿಕೊಂಡರು.
ಆರಂಭದಲ್ಲಿ ಮೃತ ನಿವೃತ್ತ ಪೊಲೀಸರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಗೌರವಾಧ್ಯಕ್ಷ ಜಿ.ಆನಂದ್, ಉಪಾಧ್ಯಕ್ಷರಾದ ಪಿ.ನಾಗರಾಜ್, ಗಂಗಪ್ಪ, ಕಾರ್ಯದರ್ಶಿ ಶಿವಬಸಪ್ಪ, ಖಜಾಂಚಿ ಸಿದ್ಧಗಂಗಯ್ಯ, ಕೆ.ಜಿ.ನಾಗರಾಜು ಸೇರಿದಂತೆ ಸಂಘದ ನಿರ್ದೇರ್ಶಕರು ಭಾಗವಹಿಸಿದ್ದರು.