ತುಮಕೂರು:
ಪತ್ರಿಕೆಯಲ್ಲಿ ಜಾಹಿರಾತು ಜಾಸ್ತಿ ಇದೆ. ಬಲಪಂಥೀಯವಾಗಿ ಬರೆಯುತ್ತಿದೆ. ಬಲಹೀನವಾಗಿದೆ. ಸಮರ್ಥವಾಗಿ ಬರುತ್ತಿಲ್ಲ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಪತ್ರಿಕೆಗಳನ್ನು ದೂರುವ ಬದಲು ಓದುಗರಾದ ನಾವು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ತಿಳಿಸಿದರು.
ಬೆಲೆ ಸಮರ 1833ರಲ್ಲೇ ಆಯಿತು. ಅದರ ಅತ್ಯಂತ ಘೋರ ರೂಪವನ್ನು ಈಗ ನೋಡುತ್ತಿದ್ದೇವೆ. ಪತ್ರಿಕೆಯ ವೆಚ್ಚವನ್ನು ಸರಿದೂಗಿಸಲು ಮಾಲಿಕರು ಜಾಹಿರಾತು ಪ್ರಕಟಿಸಲು ಆರಂಭಿಸಿದರು. ಈಗ ಪತ್ರಿಕೆಗಳು ಜಾಹಿರಾತುಗಳಿಂದಲೇ ತುಂಬಿ ಹೋಗಿವೆ. ಜಾಹಿರಾತುಗಳಿಲ್ಲದ ಪತ್ರಿಕೆಯನ್ನು ನೋಡಲು ಸಾಧ್ಯವಾಗಿಲ್ಲ. ಏಕೆಂದರೆ ಓದುಗರ ಋಣದಲ್ಲಿ ಪತ್ರಿಕೆಗಳು ಇರಬೇಕು. ಅದಕ್ಕಾಗಿ ಓದುಗರು ಹೆಚ್ಚಿನ ಬೆಲೆ ಕೊಟ್ಟು ಪತ್ರಿಕೆಗಳನ್ನು ಕೊಂಡುಕೊಳ್ಳಬೇಕು. ಇಲ್ಲದೇ ಹೋದರೆ ಮಾಲಿಕರು ಕೊಟ್ಟ ಸುದ್ದಿಯನ್ನೇ ಓದಬೇಕಾಗಿದೆ ಎಂದು ಹೇಳಿದರು.
ಈಗ ಪತ್ರಿಕೆಗಳ ಬೆಲೆ 10 ರೂಪಾಯಿ ಮಾಡಿದರೆ ಯಾರು ಕೊಂಡುಕೊಳ್ಳುತ್ತಾರೆ ಹೇಳಿ. ಆ ಕೂಡಲೇ ಕಡಿಮೆ ಬೆಲೆ ಇಟ್ಟಿರುವ ಪತ್ರಿಕೆಯನ್ನೇ ಎಲ್ಲರೂ ಕೊಳ್ಳುತ್ತಾರೆ. ಆಗ ಪತ್ರಿಕೆಗಳು ಅನಿವಾರ್ಯವಾಗಿ ಜಾಹಿರಾತು ಮೊರೆಹೋಗುತ್ತವೆ. ಅಂದರೆ ಕಾರ್ಪೋರೇಟ್ ಪರವಾಗಿ ಕೆಲಸ ಮಾಡುತ್ತವೆ. ಇಲ್ಲಿ ಪತ್ರಿಕೆಗಳನ್ನು ದೂರುವ ಜನರೇ ನಾಳೆ ಬೆಳಗ್ಗೆ ಯಾವ ಪತ್ರಿಕೆ ದರ ಇಳಿಸುತ್ತದೋ ಅದನ್ನು ಕೊಳ್ಳುವ ಪ್ರವೃತ್ತಿಯನ್ನು ಬಿಡಬೇಕು.ಅದೇ ಪತ್ರಿಕೆ ಓದುಗರ ಋಣದಲ್ಲಿದ್ದರೆ ನಾವು ನಿರೀಕ್ಷಿಸಬಹುದಾದ ಸುದ್ದಿಯನ್ನು ನೋಡಲು ಸಾಧ್ಯವಿದೆ. ಇಲ್ಲದಿದ್ದರೆ ನಾವು ಪತ್ರಿಕೆಗಳ ಕುರಿತು ಮಾತನಾಡುವ ನೈತಿಕತೆ ಇಲ್ಲವಾಗುತ್ತದೆ ಎಂದರು.
ಜಾಹಿರಾತುಗಳು ಹೆಚ್ಚುತ್ತಿರುವ ಬಗ್ಗೆ ಮಾಲಿಕರನ್ನು ದೂರಿದರೆ ಪ್ರಯೋಜನವಿಲ್ಲ. ನಮ್ಮನ್ನು ಇಂತಹ ಸಭೆಸಮಾರಂಭಗಳಿಗೆ ಕರೆಯುವ ಬದಲು ಪತ್ರಿಕೆಗಳ ಮಾಲಿಕರನ್ನು ಕರೆದು ಚರ್ಚಿಸಬೇಕು. ಮಾಲಿಕರಿಗೂ ಸಮಸ್ಯೆಗಳು, ಕಷ್ಟಗಳು ಇವೆ. ಹೀಗಾಗಿ ಅವರ ಸಮಸ್ಯೆಗಳನ್ನು ಓದುಗರಾದ ನಾವು ಕೇಳಿಸಿಕೊಳ್ಳಬೇಕು. ಓದುಗ ಮತ್ತು ಮಾಲಿಕ ಪರಸ್ಪರ ಕುಳಿತು ಚರ್ಚಿಸುವುದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ನಾವು ದೂರುವುದು ನಿಲ್ಲುತ್ತದೆ. ಇಂದು ಒಂದು ಪತ್ರಿಕೆಗೆ 10 ರೂಪಾಯಿ ವೆಚ್ಚ ವಾಗುತ್ತದೆ. ಅಷ್ಟು ಹಣವನ್ನು ಓದುಗರು ಮಾಲಿಕರಿಗೆ ನೀಡಿದರೆ ನಾವು ನಮ್ಮ ಸುದ್ದಿಗಳನ್ನು ನಿರೀಕ್ಷಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಪತ್ರಿಕೆಗಳು ಓದುಗರನ್ನು ಗ್ರಾಹಕರನ್ನಾಗಿ ಕಾಣಬಾರದು. ಹಾಗೆ ನೋಡಿದರೆ ಗ್ರಾಹಕ ಪತ್ರಿಕೆ ಕೊಳ್ಳುವುದನ್ನು ನಿಲ್ಲಿಸುತ್ತಾನೆ. ಆಗ ಪತ್ರಿಕೆಗಳು ಮುಚ್ಚಿ ಹೋಗುತ್ತವೆ. ಇದನ್ನು ಪ್ರತಿಯೊಬ್ಬ ಓದುಗನೂ ಅರ್ಥಮಾಡಿಕೊಳ್ಳಬೇಕು. ನಾವು ನೈತಿಕವಾಗಿ ಸರಿಯಿರ ಬೇಕು. ಆಗ ಪ್ರಶ್ನಿಸಲು ಹಕ್ಕಿರುತ್ತದೆ. ಹೀಗೆ ಮಾಡುವುದರಿಂದ ಪತ್ರಿಕೆಗಳು ಮತ್ತು ಪತ್ರಕರ್ತರು ಸರಿದಾರಿಯಲ್ಲಿ ನಡೆಯಬಹುದು ಅದು ಬಿಟ್ಟು ದೂರುವುದರಿಂದ ಪ್ರಯೋಜನವಿಲ್ಲ. ಇತ್ತೀಚಿನ ದಇನಗಳಲ್ಲಿ ವೈದ್ಯರು, ಸಾಹಿತಿಗಳು, ಸೇರಿದಂತೆ ಎಲ್ಲ ರಂಗವು ಕಲುಷಿತವಾಗಿದೆ. ಹಾಗೆಯೇ ಪತ್ರಕರ್ತನೂ ಕೂಡ ಭ್ರಷ್ಟನಾಗಿದ್ದಾನೆ. ಇದು ಹೋಗಬೇಕಾದ ನಾವು ಮೊದಲು ಸರಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಒಂದು ಪತ್ರಿಕೆ ಎಲ್ಲಾ ಅನುಭವಗಳನ್ನು ಒಳಗೊಳ್ಳಬೇಕು. ಎಲ್ಲಾ ವರ್ಗದ ಪತ್ರಕರ್ತರಿಂದ ಕೂಡಿರಬೇಕು. ಇತ್ತೀಚೆಗೆ ಸಂಪಾದಕರೊಬ್ಬರು ಮಾಧ್ಯಮ ಕ್ಷೇತ್ರದಲ್ಲಿ ನಮ್ಮವರೇ ಹೆಚ್ಚಾಗಿದ್ದಾರೆ ಎಂದು ಹೇಳಿದರು. ಅಲ್ಲಿ ಕೆಲಸ ಮಾಡುವವರು ಪೂರ್ವ ಗ್ರಹಪೀಡಿತರಾಗಿರುತ್ತಾರೆ. ಯಾಕೆಂದರೆ ಅದು ಜಾತಿಯ ಕಾರಣಕ್ಕೆ. ನಾವು ಇಂದು ತೀವ್ರ ಸಂಘರ್ಷದ ಯುದ್ದಭೂಮಿಯಲ್ಲಿ ಇದ್ದೇವೆ. ಸೈದ್ದಾಂತಿಕ ಪೊಳ್ಳತನದವರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಿಂದೂ ಸಮಾಜೋತ್ಸವ, ನುಡಿಸಿರಿ, ಬಂಡಾಯ ಕಾರ್ಯಾಗಾರ ಎಲ್ಲವೂ ಒಂದೇ ಎಂದು ತಿಳಿದುಕೊಳ್ಳುವುದು ಅಪಾಯಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಿದರು.
ಇತ್ತೀಚೆಗೆ ಕುಪತಿಯೊಬ್ಬರು ನುಡಿಸಿರಿಗೆ ಹೋದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಅವರು ಬಂಡಾಯದವರು ಯಾವ ಕಾರ್ಯಕ್ರಮಗಳಿಗೆ ಬೇಕಾದರೂ ಹೋಗಬಹುದು ಎಂದು ತೀರ್ಮಾನಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ನುಡಿಸಿರಿ ಮತ್ತು ಹಿಂದೂಸಮಾಜೋತ್ಸವ ನಡೆಸುವ ವ್ಯಕ್ತಿ ಮೋಹನ್ ಆಳ್ವ ಒಬ್ಬರೇ. ಹಾಗಾಗಿ ವಿಸಿ ಹಿಂದೂ ಸಮಾಜೋತ್ಸವಕ್ಕೆ ಹೋಗಿ ಮಾತನಾಡಬಹುದು. ಬದಲಾವಣೆ ಮಾಡಬಹುದು. ಬರಗೂರು ರಾಮಚಂದ್ರಪ್ಪ ಅವರಿಗೆ ಸತ್ಯದ ಅರಿವಾಗಿ ಮೋಹನ್ ಆಳ್ವರಿಂದ ತೆಗೆದುಕೊಂಡ ಹಣವನ್ನು ವಾಪಸ್ ಮಾಡಿದರು ಎಂದು ಸ್ಪಷ್ಟಪಡಿಸಿದರು.
ಸೂಟ್‍ಕೇಸ್‍ಗಳು ಕೇವಲ ವಿಧಾನಸೌಧದಲ್ಲಿ ಮಾತ್ರ ಪೂರೈಕೆಯಾಗುತ್ತಿಲ್ಲ. ರಾಜಭವನಕ್ಕೂ ಹೋಗುತ್ತಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೂ ಹೋಗುತ್ತಿವೆ. ನಾನು ಮಾಧ್ಯಮ ಸಲಹೆಗಾರನಾಗಿದ್ದಾರೆ ಯಾವ್ಯಾವ ವಿಸಿಗಳು ಸೂಟ್‍ಕೇಸ್‍ಗಳನ್ನು ಎಲ್ಲಿಗೆ ಕೊಟ್ಟುಬಂದರು ಎಂಬುದು ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಮಾಧ್ಯಮ ಲೋಕದಲ್ಲಿ ಮೀಟೂ ನಡೆಯತ್ತಿದೆ. ಯಾರ್ಯಾರು ಮೀಟೂ ಗೆ ಒಳಗಾಗಿದ್ದಾರೆ ಎಂಬುದು ಗೊತ್ತಿದೆ. ಅದ್ಯಾಕೆ ಬಯಲಿಗೆ ಬರುತ್ತಿಲ್ಲ. ಮಾಧ್ಯಮದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಹೊರಬರುತ್ತಿಲ್ಲ. ಇದನ್ನು ಎಲ್ಲರೂ ಪ್ರಶ್ನಿಸಬೇಕು. ಇದಕ್ಕೆ ನೈತಿಕತೆ ಇರಬೇಕು ಎಂದರು.
ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ವಿರುದ್ಧ ಪತ್ರಿಕೆಗಳು ಒಂದು ಸುದ್ದಿಯನ್ನೂ ಬರೆದಿಲ್ಲ. ಒಂದು ವಿರುದ್ದದ ಸುದ್ದಿ ಬರುತ್ತಿದ್ದಂತೆ ಆ ಮಾಧ್ಯಮ ಸಂಸ್ಥೆಯ ಮೇಲೆ ತನಿಖೆ ನಡೆಸಲಾಗುತ್ತದೆ. ಆ ಪತ್ರಕರ್ತ ಯಾರು? ಎಲ್ಲಿಯವನು ಹೀಗೆ ಆತನ ಹಿನ್ನೆಯನ್ನು ಕಲೆಹಾಕಿ ಕಿರುಕುಳ ಕೊಡುವ ಘಟನೆಗಳು ನಮ್ಮ ಮುಂದೆ ನಡೆದು ಹೋಗಿವೆ. ಮುಂದಿನ ದಿನಗಳಲ್ಲಿ ಕೇಬಲ್‍ಗಳು ಬಿದ್ದುಹೋಗಲಿವೆ. ಕಾಪೋರೇಟ್ ಸಂಸ್ಥೆಯೊಂದು ಈ ಕ್ಷೇತ್ರಕ್ಕೆ ಈಗಾಗಲೇ ಧುಮುಕಿದೆ. ಅನಿಲ್ ಅಂಬಾನಿ ಕೇಬಲ್ ಲೋಕಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇನ್ನು ಮುಂದಿ ಇಂಟರ್ ನೆಟ್‍ನಲ್ಲಿ ನಾವು ಟಿವಿಗಳನ್ನು ನೋಡಬಹುದಾಗಿದೆ ಇದು ಅಪಾಯದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಚಂದ್ರಶೇಖರಪಾಟೀಲ್ ಮಾತನಾಡಿ ಬಂಡಾಯ ಕೋಮಾದಲ್ಲಿದೆ ಎಂದು ಕೆಲವರು ಹಬ್ಬಿಸುತ್ತಿದ್ದಾರೆ ಇದು ಅರ್ಧ ಸತ್ಯ. ಬಂಡಾಯದ ಆಶಯಗಳು ಇಂದಿಗೂ ಬತ್ತಿಲ್ಲ. ಅದು ಕೆರೆ ಇದ್ದಂತೆ. ಸೆಲೆಗಳು ಹಾಗೆಯೇ ಇವೆ. ಹಿಂದಿನ ಹೋರಾಟದ ಬಿರುಸು ಇಂದು ಇಲ್ಲ ಎಂಬುದು ಸತ್ಯ. ಇವತ್ತಿನ ಸಮಸ್ಯೆಗಳು ಭೀಕರವಾಗಿವೆ ಎಂದು ತಿಳಿಸಿದರು.
ಸಾಹಿತಿ ಕೆ.ಬಿ.ಸಿದ್ದಯ್ಯ ಮಾತನಾಡಿ, ಬಂಡಾಯ ಸಾಹಿತ್ಯ ಸಂಘಟನೆ ದಲಿತರು, ರೈತರು ಮತ್ತು ಸ್ತ್ರೀ ಚಳವಳಿಯನ್ನು ಒಳಗೊಳ್ಳ ಬೇಕು. ಆ ಮೂಲಕ ಮರುಹುಟ್ಟು ಪಡೆಯಬೇಕು. ಬಂಡಾಯ ಸಂಘಟನೆ ಏಕಕಾಲದಲ್ಲಿ ಏಕವಾಗಿಯೂ ಬಹುತ್ವ ಚಳವಳಿ ಆಗಿಯೂ ಮುನ್ನಡೆಯಬೇಕು. ದಲಿತ ಚಳವಳಿಯ ವಿಶಾಲ ತಳಹದಿಯೂ ಬಂಡಾಯದಲ್ಲಿ ನೆಲೆಗೊಳ್ಳಬೇಕು. ಆಗ ಬಂಡಾಯ ಸಾಹಿತ್ಯ ಸಂಘಟನೆಗೆ ಬಲ ಬರುತ್ತದೆ. ಇಲ್ಲದೇ ಹೋದರೆ ಸ್ಥಗಿತಗೊಳ್ಳುತ್ತದೆ. ದರೈಸ್ತ್ರೀ ಚಳವಳಿ ಒಳಗೊಂಡರ ಬಂಡಾಯದ ವ್ಯಾಪ್ತಿ ವಿಸ್ತರಿಸುತ್ತದೆ. ಇದಕ್ಕೆ ಈ ಕಾರ್ಯಾಗಾರ ಮುನ್ನಡಿ ಹಾಡಬೇಕು ಎಂದು ಅಭಿಪ್ರಾಯಪಟ್ಟರು.
ಸಮಾರೋಪ ಸಮಾರಂಭದಲ್ಲಿ ವಕೀಲ ಎಸ್.ರಮೇಶ್, ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಶೇಖರ್ ಮಾತನಾಡಿದರು. ರಾಮಕೃಷ್ಣ ಬೂದಿಹಾಳ ಸ್ವಾಗತಿಸಿದರು. ಎಚ್.ಆರ್.ದೇವರಾಜು ವಂದಿಸಿದರು. ಭಕ್ತರಹಳ್ಳಿ ಕಾಮರಾಜ್ ನಿರೂಪಿಸಿದರು.