ತುಮಕೂರು
ಎಲ್ಲಾ ಶಾಲೆಗಳಲ್ಲಿಯೂ ದೈಹಿಕ ಶಿಕ್ಷಣದ ರೀತಿಯಲ್ಲಿಯೇ ಮಕ್ಕಳಿಗೆ ಭರತನಾಟ್ಯ,ಸಂಗೀತ, ನೃತ್ಯ, ಶಾಸ್ತ್ರೀಯ ವಾದ್ಯಗಳ ಕಲಿಕೆಗೆ ಅವಕಾಶ ಕಲ್ಪಿಸಿದರೆ ದೇಶ ಹೆಚ್ಚು ಸಾಂಸ್ಕøತಿಕವಾಗಿ ಮುಂದೆ ಬರಲು ಸಾಧ್ಯ ಎಂದು ಆರ್.ಎಸ್.ಎಸ್.ನ ತುಮಕೂರು ವಿಭಾಗೀಯ ಸಂಚಾಲಕ ಎನ್.ಎಸ್.ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಇಂಟರ್ ನ್ಯಾಶನಲ್ ಆಟ್ರ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯು ದಶಮಾನೋತ್ಸವದ ಅಂಗವಾಗಿ ಸಂಸ್ಥೆಯ ನಿರ್ದೇಶಕರಾದ ಶ್ರೀವತ್ಸ ಶಾಂಡಿಲ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಮೃತ್ ಕಲಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಮಕ್ಕಳನ್ನು ಕೇವಲ ಅಂಕ ಪಡೆಯುವ ಮಿಷನ್‍ಗಳಂತೆ ಪರಿಗಣಿಸುವ ಬದಲು, ಅವರಿಗೆ ಕಲೆ, ಸಾಹಿತ್ಯ, ಸಂಗೀತ ಕಲಿಸುವ ಮೂಲಕ ಮಕ್ಕಳ ಸಮಗ್ರ ವಿಕಾಸಕ್ಕೆ ಶಾಲಾ, ಕಾಲೇಜುಗಳು ಮುಂದಾಗಬೇಕೆಂದರು.
ಮಕ್ಕಳಿಗೆ ಸ್ವಾತಂತ್ರ ಹೋರಾಟಗಾರರಾದ ರಾಣಿ ಅಬ್ಬಕ್ಕ ,ಕಿತ್ತೂರು ರಾಣಿ ಚನ್ನಮ್ಮ, ನವದುರ್ಗೆಯರ ಪಾತ್ರಗಳನ್ನು ಭರತನಾಟ್ಯದ ಮೂಲಕ ತೋರಿಸುವ ಮೂಲಕ ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಮಾಡಲಾಗುತ್ತಿದೆ. ಸರಕಾರದಿಂದ ಯಾವುದೇ ಸಹಾಯವಿಲ್ಲದಿದ್ದರೂ ಶ್ರೀವತ್ಸ ಶಾಂಡಿಲ್ಯ ಅವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಮಕ್ಕಳು ಸಹ ಜೀವ ತುಂಬಿ ಅಭಿನಯಿಸಿದ್ದಾರೆ. ನಿಜಕ್ಕೂ ಇಂತಹ ಮಾದರಿಗಳನ್ನು ಯುವಜನರಿಗೆ ಪರಿಚಯಿಸುವ ಅಗತ್ಯವಿದೆ ಎಂದು ಎಸ್.ಎನ್.ನಾಗೇಂದ್ರ ಪ್ರಸಾದ್ ತಿಳಿಸಿದರು
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಪ್ರತಿಭೆ ಎಂಬುದು ಯಾರ ಸ್ವತ್ತಲ್ಲ.ಪ್ರತಿಭೆ ಎಂಬುದು ಜಾತಿ, ಕುಲ, ಮತಗಳನ್ನು ಮೀರಿದ್ದು,ಮಕ್ಕಳಿಗೆ ವೇದಿಕೆ ಸಿಕ್ಕರೆ, ಅದಕ್ಕೆ ತಕ್ಕ ತರಬೇತಿ ದೊರೆತರೆ ಸಾಧನೆಗೆ ಮೈಲಿಗೈಲು ಸಾಧ್ಯ. ತುಮಕೂರು ಜಿಲ್ಲೆ ಕಲೆ, ಸಾಹಿತ್ಯಕ್ಕೆ ಹೆಸರುವಾದಿಯಾದ ಜಿಲ್ಲೆ,ನಾಟಕ ರತ್ನ ಡಾ.ಗುಬ್ಬಿ ವೀರಣ್ಣ, ಹಾಸ್ಯ ಚಕ್ರವರ್ತಿ ನರಸಿಂಹರಾಜು, ಮಾಸ್ಟರ್ ಹಿರಣ್ಣಯ್ಯ, ಹಿರಣ್ಣಯ್ಯ, ಬೆಳ್ಳಾವೆ ನರಹರಿಶಾಸ್ತ್ರಿ ಹೀಗೆ ಹತ್ತು, ಹಲವು ಜನರು ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಕಲ್ಪತರು ನಾಡಿನ ಪ್ರತಿಭೆಗಳಿಗೆ ಶ್ರೀವತ್ಸ ಶಾಂಡಿಲ್ಯ ಅವರು ವಿವಿಧ ಸಂಘಟನೆಗಳ ಮೂಲಕ ಹೆಸರು ತರುವಂತಹ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನೃತ್ಯ ಗುರುಗಳಾದ ನೀಲಾಲಯ ನೃತ್ಯಕೇಂದ್ರದ ಶ್ರೀಮತಿ ಬಾಲಾ ವಿಶ್ವನಾಥ,ವಿದುಷಿ ಪ್ರಣಿತ ರಘುರಾಮ್,ವಿದ್ವಾನ್ ವಿಕಾಸ್.ಎಸ್,ದಾಮೋದರ್ ನಾಯಕ್,ಶ್ರೀಸಾಯಿರಾಮನ್ ನೃತ್ಯಕೇಂದ್ರದ ವಿದ್ವಾನ್ ಡಾ. ಸಾಗರ್.ಟಿ.ಎಸ್. ಅವರುಗಳ ತಂಡದ ಕಲಾವಿದರು ಭಾಗಹಿಸಿ,ರಾಣಿ ಅಬ್ಬಕ್ಕ, ರಾಣಿ ಕೆಳದಿಚೆನ್ನಮ್ಮ,ರಾಣಿ ಚೆನ್ನಬೈರಾದೇವಿ ,ರಾಣಿ ಬೆಳವಡಿ ಮಲ್ಲಮ್ಮ ಇವರುಗಳ ಸಾಹಸ ಕಥೆಗಳಿಗೆ ಭರತನಾಟ್ಯ ಶೈಲಿಯಲ್ಲಿ ಶಾಸ್ತ್ರೀಯ ನೃತ್ಯ ಮಾಡಿ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿದರು.