ತುಮಕೂರು
ಉತ್ತರಖಾಂಡ್ ರಾಜ್ಯದ ಹರಿದ್ವಾರದಲ್ಲಿ ನಡೆಯುವ 48ನೇ ಜೂನಿಯರ್ ನ್ಯಾಷನಲ್ ಬಾಲಕರ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಕರ್ನಾಟಕ ರಾಜ್ಯದ ಬಾಲಕರ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ತುಮಕೂರು ಜಿಲ್ಲೆಯ ಕಬಡ್ಡಿ ತಂಡವನ್ನು ಆಯ್ಕೆ ಮಾಡಲು ಬುಧವಾರ ನಗರದ ಕೆ.ಆರ್.ಬಡಾವಣೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮೈದಾನದಲ್ಲಿ ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಆಸೋಸಿಯೇಷನ್ (ರಿ.) ವತಿಯಿಂದ ಆಯ್ಕೆ ಟ್ರಯಲ್ಸ್ ನಡೆಯಿತು.
ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎಸ್. ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರವೀಂದ್ರ, ಉಪಾಧ್ಯಕ್ಷರಾದ ಕೆ.ಮಹಮದ್ ಇಸ್ಮಾಯಿಲ್, ಎಸ್.ಕೆ.ಶಿವಣ್ಣ ಹಾಗೂ ಅಸೋಸಿಯೇಷನ್‍ನ ಇತರೆ ಪದಾಧಿಕಾರಿಗಳು ಆಯೋಜಿಸಿದ್ದ ಈ ಕಬಡ್ಡಿ ಆಯ್ಕೆ ಟ್ರಯಲ್ಸ್‍ನಲ್ಲಿ ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಿಂದ ಸುಮಾರು 120 ಮಂದಿ ಕಬಡ್ಡಿ ಆಟಗಾರರು ಭಾಗವಹಿಸಿದ್ದರು.
ಬುಧವಾರ ನಡೆದ ಆಯ್ಕೆ ಟ್ರಯಲ್ಸ್‍ನಲ್ಲಿ 14 ಮಂದಿ ಆಯ್ಕೆಯಾಗಿ ನವೆಂಬರ್ 3 ರಿಂದ ನವೆಂಬರ್ 9 ರವರೆಗೂ ನಡೆಯಲಿರುವ ಕಬಡ್ಡಿ ತರಬೇತಿ ಶಿಬಿರದಲ್ಲಿ ತರಬೇತಿಯನ್ನು ಪಡೆದು ನವೆಂಬರ್ 11 ರಿಂದ 13ರವರೆಗೆ ಬೆಂಗಳೂರು ದಕ್ಷಿಣ ಆನೆಕಲ್ ತಾಲ್ಲೂಕು ಚಿಕ್ಕನಾಗಮಂಗಲದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಿಲ್ಲಾ ತಂಡಕ್ಕೆ ಆಯ್ಕೆಯಾದ 14 ಮಂದಿಗೆ ನವೆಂಬರ್ 3 ರಿಂದ ನ.9ರ ವರೆಗೆ ತರಬೇತಿ ನೀಡಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು ಎಂದು ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಆಸೋಸಿಯೇಷನ್ ಅಧ್ಯಕ್ಷ ಟಿ.ಎಸ್. ಪಂಚಾಕ್ಷರಿ ತಿಳಿಸಿದರು.
ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ.ಆರ್ .ರವೀಂದ್ರ ಮಾತನಾಡಿ, ಕಬಡ್ಡಿಯಂತಹ ಕ್ರೀಡೆಗಳು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಉತ್ತಮವಾದುವು. ಯುವಕರು ಇಂತಹ ಕ್ರೀಡೆಗಳ ಬಗ್ಗೆ ಹೆಚ್ಚು ಒಲವು ತೋರಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಬಡ್ಡಿ ಕ್ರೀಡಾಪಟುಗಳು ಒಂದು ವಾರಗಳ ಕಾಲ ತರಬೇತಿ ಪಡೆದು ರಾಜ್ಯಮಟ್ಟದಲ್ಲಿ ನಡೆಯಲಿರುವ ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಉತ್ತರಖಾಂಡ್ ರಾಜ್ಯದ ಹರಿದ್ವಾರದಲ್ಲಿ ನಡೆಯುವ 48ನೇ ಜೂನಿಯರ್ ನ್ಯಾಷನಲ್ ಬಾಲಕರ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ಉಪಾಧ್ಯಕ್ಷರಾದ ಕೆ.ಮಹಮ್ಮದ್ ಇಸ್ಮಾಯಿಲ್, ಎನ್.ಕೆ. ಶಿವಣ್ಣ, ಜಂಟಿ ಕಾರ್ಯದರ್ಶಿ ಟಿ.ಜಿ. ನಟರಾಜ್, ಸಂಘಟನಾ ಕಾರ್ಯದರ್ಶಿ ಮುನಿರಾಜು, ನಿರ್ದೇಶಕ ನವೀನ್, ಉಮಾಶಂಕರ್ (ಉಮೇಶ್), ರಮೇಶ್, ದೊಡ್ಡಯ್ಯ, ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.