ತುಮಕೂರು
ತುಮಕೂರು ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್‍ಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಕುರಿತಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ ಚರ್ಚೆ ನಡೆಸಿದರು.
ನಗರದ ತುಮಕೂರು ವಿವಿ ಕುಲಪತಿಗಳ ಕಚೇರಿಗೆ ನಿಯೋಗದಲ್ಲಿ ತೆರಳಿದ ಮುರಳೀಧರ ಹಾಲಪ್ಪ ಅವರು, ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜು ಹಾಗೂ ಹಾಸ್ಟೆಲ್‍ಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ವಿಶ್ವವಿದ್ಯಾಲಯ ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ಪುನರುತ್ಥಾನಗೊಳಿಸುವುದು, ವಿಶ್ವವಿದ್ಯಾಲಯದಲ್ಲಿ ಕ್ರೀಡಾಪಟುಗಳ ಶೈಕ್ಷಣಿಕ ಹಾಗೂ ಕ್ರೀಡೆಯ ಖರ್ಚು ಭರಿಸಿ ದತ್ತು ಪಡೆಯುವ ಪದ್ಧತಿ ಆರಂಭಿಸಬೇಕು. ಪ್ರತಿಭೆಗಳನ್ನು ಗುರುತಿಸಿ ಸಾಧಕರಿಗೆ ಅನುದಾನ, ಹುದ್ದೆಗಳಂತಹ ಹೆಚ್ಚಿನ ಮಟ್ಟದಲ್ಲಿ ಪೆÇ್ರೀತ್ಸಾಹ ನೀಡಬೇಕು, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಕ್ರೀಡಾ ಬೋಧಕರ ಹಾಗೂ ಇತರೆ ಹುದ್ದೆಗಳ ನೇಮಕಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪ್ರತಿಯೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉದ್ಯೋಗ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಕ್ಯಾಂಪಸ್‍ಗಳಲ್ಲಿ ಉದ್ಯೋಗ ಸಂದರ್ಶನ ಮೇಳಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಓವರ್ ಲೋಡ್ ಸಮಸ್ಯೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಣ್ಣೀರು ಸ್ನಾನ, ಕಿಟಕಿಗಳಿಲ್ಲದೆ ಚಳಿ, ಸೊಳ್ಳೆ ಕಾಟಕ್ಕೆ ರಾತ್ರಿಯಿಡೀ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ವಿದ್ಯಾರ್ಥಿಗಳು ಹೇಳುತ್ತಿದ್ದು, ಕೂಡಲೇ ಗಮನ ಹರಿಸಬೇಕೆಂದು ಮುರಳೀಧರ ಹಾಲಪ್ಪ ಮನವಿ ಮಾಡಿದರು.
ನಾಲ್ಕು ಕುಲಪತಿಗಳ ಅವಧಿ ಮುಗಿದರೂ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಪೂರ್ಣವಾಗಿಲ್ಲ, ಶೈಕ್ಷಣಿಕ ಜಿಲ್ಲೆ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಕಲ್ಪತರು ನಾಡು ತುಮಕೂರು ಜಿಲ್ಲೆಗೆ ಕಪ್ಪುಚುಕ್ಕೆಯೆನಿಸಿದೆ.
ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ಭದ್ರತಾ ಸಿಬ್ಬಂದಿ ನಿಯೋಜನೆ,
ಹಾಸ್ಟೆಲ್ ಮುಂಭಾಗದ ಬೀದಿ ದೀಪಗಳನ್ನು ಸರಿಪಡಿಸುವುದು, ಸೊಳ್ಳೆ, ಹಾವುಗಳ ಕಾಟ ತಪ್ಪಿಸಬೇಕು, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಸೌಕರ್ಯಕ್ಕೆ ಒತ್ತು ಕೊಡಬೇಕೆಂದು ಮನವಿ ಸಲ್ಲಿಸಿದರು.
ಮನವಿಯನ್ನು ಆಲಿಸಿದ ತುಮಕೂರು ವಿವಿ ಕುಲಪತಿ ಪ್ರೊ.ವೆಂಕಟೇಶ್ವರಲು, ಎಸ್‍ಸಿಪಿ/ಟಿಎಸ್‍ಪಿ ಅನುದಾನದಡಿಯಲ್ಲಿ ಹಾಸ್ಟೆಲ್‍ಗಳ ದುರಸ್ಥಿ ಕಾರ್ಯ ನಡೆಯುತ್ತಿದೆ ಎಂದರು.
ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಕ್ರೀಡಾ ಉತ್ತೇಜನಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸುಮಾರು 1.30 ಕೋಟಿ ರೂ.ವೆಚ್ಚದಲ್ಲಿ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳ ಆಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ನವೆಂಬರ್‍ನಲ್ಲಿ ತುಮಕೂರು ವಿವಿ ನೂತನ ಕ್ಯಾಂಪಸ್‍ನಲ್ಲಿ ಕಲ್ಪತರು ಉತ್ಸವ ಏರ್ಪಡಿಸಿ, ಅಲ್ಲಿ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಸೌತ್ ಜೋನ್‍ಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾಥಿಗಳ ಮರುಮೌಲ್ಯಮಾಪನ ಮತ್ತು ಚಾಲೆಂಜಿಂಗ್ ಮೌಲ್ಯಮಾಪನ ಶುಲ್ಕ ಪಾವತಿಸಿದ್ದರೂ ಮರುಮೌಲ್ಯಮಾಪನ ಮುಗಿದ ನಂತರ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ಕಾಲೇಜುಗಳ ಪ್ರಾಂಶುಪಾಲರು ವಾಪಸ್ ನೀಡುತ್ತಿಲ್ಲ ಎಂದು ಎನ್‍ಎಸ್‍ಯುಐ ಸಂಘಟನೆಯ ವಿದ್ಯಾರ್ಥಿಗಳು ದೂರಿದರು.
ಚಾಲೆಂಜಿಂಗ್ ಮೌಲ್ಯಮಾಪನಕ್ಕೆ ಮಾತ್ರ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕ ವಾಪಸಾತಿಯಾಗಲಿದೆ. ಸಾಮಾನ್ಯ ಮೌಲ್ಯಮಾಪನಕ್ಕೆ ಪಾವತಿಸಿದ ಶುಲ್ಕ ವಾಪಸ್ ಆಗುವುದಿಲ್ಲ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಕುಲಪತಿಗಳು ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮರಿಚನ್ನಮ್ಮ, ಸಂಜೀವ್‍ಕುಮಾರ್, ನಟರಾಜಶೆಟ್ಟಿ, ಬ್ರಹ್ಮಾನಂದರೆಡ್ಡಿ, ಆದಿಲ್ ಖಾನ್, ದಿಲೀಪ್, ದೀಪಿಕಾ, ಯಶೋಧಮ್ಮ, ಕಿರಣ್, ಜಿಲ್ಲಾ ಸೇವಾದಳ ಅಧ್ಯಕ್ಷ ಶಿವಪ್ರಸಾದ್, ರಹೀಮ್, ಅದೀಲ್‍ಖಾನ್, ಎನ್‍ಎಸ್‍ಯುಐನ ಹೇಮಂತ್, ಆಕಾಶ್, ಬೈರೇಶ್, ತರುಣ್ ಮುಂತಾದವರು ಭಾಗವಹಿಸಿದ್ದರು.