ತುಮಕೂರು
ಲೋಕಸಭೆಯ ಮಾಜಿ ಉಪಸಭಾಪತಿ ದಿವಂಗತ ಎಸ್. ಮಲ್ಲಿಕಾರ್ಜುನಯ್ಯ ಅವರ 92ನೇ ಜನ್ಮದಿನೋತ್ಸವ ಸಮಿತಿ ವತಿಯಿಂದ ನ.6 ರಂದು ಸಂಜೆ 4 ಗಂಟೆಗೆ ನಗರದ ಎಂ.ಜಿ.ರಸ್ತೆಯ ಬಾಲಭವನದಲ್ಲಿ ರಾಷ್ಟ್ರಸೇವಕ ಮಲ್ಲಿಕ್ ಸಂಸ್ಮರಣಾ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.
ನಗರದಲ್ಲಿ ಗುರುವಾರ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಭೂತಪೂರ್ವ ವ್ಯಕ್ತಿತ್ವದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಎಸ್.ಮಲ್ಲಿಕಾರ್ಜುನಯ್ಯನವರು ಆಡಿಟರ್ ಆಗಿ ವಕೀಲರಾಗಿ ತುಮಕೂರು ನಗರಸಭೆ ಸದಸ್ಯರಾಗಿ ಆರ್‍ಎಸ್‍ಎಸ್ ಸಕ್ರೀಯ ಕಾರ್ಯಕರ್ತರಾಗಿ ಜನಸಂಘದ ಮೂಲಕ ಬಿಜೆಪಿ ಸೇರಿ ನಾಲ್ಕು ಬಾರಿ ವಿಧಾನಪರಿಷತ್ ಸದಸ್ಯರಾಗಿ ಮೂರು ಬಾರಿ ಲೋಕಸಭಾ ಸದಸ್ಯರಾಗಿ ಒಮ್ಮೆ ಲೋಕಸಭೆಯ ಉಪಸಭಾಪತಿಯಾಗಿ ಎಲ್ಲ ರೀತಿಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ ಎಂದರು.
ತುಮಕೂರು ನಗರಕ್ಕೆ ಅಂಚೆ ಮತ್ತು ದೂರಸಂಪರ್ಕ ಕಚೇರಿ ತರಲು ಶ್ರಮಿಸಿದ ಇವರು ನೀರಾವರಿಗೆ ಆಧ್ಯತೆ ನೀಡಿ ರೈತಪರ ಹೋರಾಟಗಳನ್ನು ಮಾಡಿ ಪದವೀಧರರು ಶಿಕ್ಷಕರ ಪರವಾಗಿ ಸರ್ಕಾರದ ಗಮನ ಸೆಳೆಯುವ ಮೂಲಕ ಜನಸ್ಪಂದನೆ ಕೆಲಸಗಳನ್ನು ಮಾಡಿದ್ದಾರೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸದಸ್ಯ ಸಿ.ಟಿ.ರವಿ ಸಮಾರಂಭವನ್ನು ಉದ್ಘಾಟಿಸಿ, ಗ್ರಂಥ ಬಿಡುಗಡೆ ಮಾಡುವರು. ಶ್ರೀದೇವಿ ಮೆಡಿಕಲ್ ಕಾಲೇಜು ಅಧ್ಯಕ್ಷ ಡಾ. ಎಂ.ಆರ್.ಹುಲಿನಾಯ್ಕರ್ ಅಧ್ಯಕ್ಷತೆ ವಹಿಸುವರು. ಎಸ್.ಮಲ್ಲಿಕಾರ್ಜುನಯ್ಯನವರ ಧರ್ಮಪತ್ನಿ ಜಯದೇವಮ್ಮ, ಸಂಸದ ಜಿ.ಎಸ್.ಬಸವರಾಜು, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶಾಸಕರಾದ ಡಾ. ಜಿ.ಪರಮೇಶ್ವರ್, ಎಸ್.ಆರ್.ಶ್ರೀನಿವಾಸ್, ಡಿ.ಸಿ.ಗೌರಿಶಂಕರ್, ಆರ್.ರಾಜೇಂದ್ರ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವರಾದ ಡಿ.ಹೆಚ್.ಶಂಕರಮೂರ್ತಿ, ರಾಮಚಂದ್ರೇಗೌಡ, ಟಿ.ಬಿ.ಜಯಚಂದ್ರ, ಸೊಗಡು ಶಿವಣ್ಣ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಆರ್.ನಾರಾಯಣ್, ಎಸ್.ಷಫಿಅಹಮದ್, ಬಿ.ಸುರೇಶ್‍ಗೌಡ, ಗಂಗಹನುಮಯ್ಯ, ಎಸ್.ರಫೀಕ್ ಅಹಮದ್, ಕೆ.ಎಸ್.ಕಿರಣ್‍ಕುಮಾರ್, ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಉಪಾಧ್ಯಕ್ಷರಾದ ಡಾ. ಆರ್.ಎಲ್.ರಮೇಶಬಾಬು, ಮುರುಳೀಧರ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಎಸ್.ನಿರಂಜನ್, ಕಾರ್ಯದರ್ಶಿ ಅಯಾಸ್,ಸದಸ್ಯ ಶಿವಾಜಿ ಗಣೇಶನ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.