ತುಮಕೂರು
ಕನ್ನಡ ಕೇವಲ ಭಾಷೆ ಅಲ್ಲ ಇದು ನಮ್ಮ ಬದುಕು. ಬದುಕು ಹೇಗೆ ನಿರಂತರತೆ ಇರುತ್ತದೆಯೋ ಹಾಗೆ ಭಾಷೆ ನಿರಂತರವಾಗಿರಬೇಕು ಎಂದು ಕವಿಯಿತ್ರಿ ರಂಗಮ್ಮ ಹೊದೇಕಲ್ ಆಶಿಸಿದರು.
ನಗರದ ಸರಸ್ವತಿಪುರಂನ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ 67ನೇ ಕನ್ನಡ ರಾಜ್ಯೋತ್ಸವನ್ನು ಭುವನೇಶ್ವರಿ ದೇವಿಗೆ ಪುಷ್ಪ ನಮನಸಲ್ಲಿಸಿ, ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾತು ಬರದ ಮೂಗ ಕೂಡ ಕನ್ನಡ ಭಾಷೆ ಉಚ್ಛರಿಸುತ್ತಾನೆ ಎಂದರೆ ಅದು ಕನ್ನಡ ಭಾಷೆಯ ಶಕ್ತಿ. ಹೀಗಾಗಿ ನಾವು ಬೇರೆ ಭಾಷೆ ಕಲಿಯುವುದರ ಜೊತೆಗೆ ಕನ್ನಡವನ್ನು ಕಲಿತು ನಿರಂತರವಾಗಿ ಬಳಸಬೇಕು. ಗೆದ್ದಿರುವ ಕನ್ನಡದ ಗೆಲುವನ್ನು ಕಾಪಾಡಬೇಕು ಎಂದು ರಂಗಮ್ಮ ಹೊದೇಕಲ್ ಹೇಳಿದರು.
ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ಮಾತನಾಡಿ, ಕನ್ನಡ ನಾಡು ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಶ್ರೀಮಂತ ಸಂಪದ್ಭರಿತ ನಾಡಾಗಿದೆ. ಇದಕ್ಕಾಗಿಯೇ ಕನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಸಂದಿವೆ. ಕನ್ನಡ ಭಾಷೆ ಬಗ್ಗೆ ಅಭಿಮಾನವಿರಲಿ. ಈ ನಾಡಿನಲ್ಲಿ ಜನಿಸಿರುವ ನಾವೇ ಪುಣ್ಯವಂತರು ಎಂದು ನುಡಿದರು.
ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಬಿ.ಎಸ್ ಲತಾ ಮಾತನಾಡಿ, ಮಾತೃ ಭಾಷೆಯಲ್ಲಿ ಮೂಲ ಶಿಕ್ಷಣ ನೀಡಬೇಕು. ವಿವಿಧ ಭಾಷೆಗಳನ್ನು ಕಲಿತಾಗ ಮಾತ್ರ ಜ್ಞಾನ ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ತಿಯರು ಕರ್ನಾಟಕ ಏಕೀಕರಣ, ಕನ್ನಡ ಭಾಷೆಯ ಹುಟ್ಟು ಮತ್ತು ಬೆಳವಣಿಗೆ ಕುರಿತು ವಿವರಿಸಿ, ಕನ್ನಡ ಗೀತೆಗಳನ್ನು ಹಾಡಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಕೆ.ಸಿದ್ಧರಾಜು, ಎನ್.ಎನ್ ಮಾರುತಿ ಸೇರಿದಂತೆ ಬೋಧಕ ಮತ್ತು ಬೊಧಕೇತರ ವರ್ಗ ಹಾಗೂ ಪ್ರಶಿಕ್ಷಣಾರ್ತಿಯರು ಭಾಗಿಯಾಗಿದ್ದರು.