ತುಮಕೂರು
ತುಮಕೂರು ಜಿಲ್ಲೆಯ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾದ ಸ್ವೀಪ್ ಚಟುವಟಿಕೆ ಹಾಗೂ ಮುಂಬರುವ ಚುನಾವಣಾ ಹಿನ್ನಲೆಯಲ್ಲಿ ಮತದಾರರ ಪಟ್ಟಿ, ಮತದಾನದ ಮಹತ್ವ ಕುರಿತು ಅಧಿಕಾರಿಗಳು ಕೈಗೊಳ್ಳಬೇಕಾದ ಪ್ರಚಾರ, ಅರಿವು ಕಾರ್ಯಕ್ರಮಗಳ ಕುರಿತು ಪಿ.ಎಸ್.ವಸ್ತ್ರದ್, ಐಎಎಸ್(ನಿ), ರಾಜ್ಯ ಸ್ವೀಪ್ ಸಮಾಲೋಚಕರು, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಅವರಿಂದು
ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಮತ್ತು ಎಲಕ್ಟರೋಲ್ ಪಾರ್ಟಿಸಿಪೇಶನ್(ಸ್ವೀಪ್) ಕಾರ್ಯಚಟುವಟಿಗಳ ಕುರಿತು ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 18-19 ವಯೋಮಾನದ ಯುವ ಜನಾಂಗವನ್ನು ಸಕ್ರಿಯವಾಗಿ ಮತದಾನ ಪಟ್ಟಿಗೆ ಸೇರ್ಪಡೆ ಮಾಡುವುದು, ಮಹಿಳಾ ಮತದಾರರು, ವಿಕಲಚೇತನರು, ಬುಡಕಟ್ಟು ಜನಾಂಗ, ಲೈಂಗಿಕ ಕಾರ್ಯಕರ್ತರು, ವೃದ್ದರು ಎಲ್ಲರೂ ಸಹ ಮತದಾನ ಪಟ್ಟಿಯಲ್ಲಿ ಹೆಸರು ಇರುವಂತೆ ಅರಿವು
ಮೂಡಿಸುವುದು ಹಾಗೂ ಎಲ್ಲರೂ ಸಕ್ರೀಯವಾಗಿ ಮತದಾನದಲ್ಲಿ ಭಾಗವಹಿಸುವ ರೀತಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.
ತುಮಕೂರು ಜಿಲ್ಲೆಯನ್ನು ಗಣನೆಗೆ ತೆಗೆದುಕೊಂಡಲ್ಲಿ 2018ರಲ್ಲಿ ಒಟ್ಟಾರೆ ಮತದಾನ ಸರಾಸರಿ ಶೇ.82.04 ಉತ್ತಮವಾಗಿದೆ. ಆದರೆ ತುಮಕೂರು ನಗರ ಕ್ಷೇತ್ರದಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಮಹಿಳಾ ಮತದಾರರು ಮತದಾರರ ಪಟ್ಟಿಯಲ್ಲಿ ಹೆಚ್ಚಾಗಿ ನೋಂದಣಿಯಾಗಬೇಕಿದೆ, ಈ ಕೆಲಸ ತುಮಕೂರು ಮಹಾನಗರ ಪಾಲಿಕೆಯ ವತಿಯಿಂದ ಆಗಬೇಕಿದೆ ಎಂದರು.
ಎಲ್ಲರೂ ವೋಟರ್ ಹೆಲ್ಪ್ ಲೈನ್ ಅಪ್ ಡೌನ್ಲೋಡ್ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ. ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವಿಕೆ, ಇತ್ಯಾದಿ ಎಲ್ಲವೂ ಸಹ ಈ ಆಪ್‍ನಲ್ಲಿದ್ದು, ಸಾರ್ವಜನಿಕರಿಗೆ ಇದರ ಕುರಿತು ವ್ಯಾಪಕ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಕ್ಯಾಂಪಸ್ ಅಂಬಾಸಿಡರ್‍ಗಳನ್ನು ನೇಮಕ ಮಾಡುವಂತೆ ತುಮಕೂರು ವಿ.ವಿ. ಅಧಿಕಾರಿಗಳು ಹಾಗೂ ಡಿಡಿಪಿಯು ಅವರುಗಳಿಗೆ ಸೂಚಿಸಿದ ಅವರು, ಮುಖ್ಯ ಚುನಾವಣಾ ಅಧಿಕಾರಿಗಳ ಅನುಮತಿ ಪಡೆದು ಜಿಲ್ಲೆಯ ಚುನಾವಣಾ ಐಕಾನ್ ನೇಮಿಸುವಂತೆ ಸ್ವೀಪ್ ಅಧ್ಯಕ್ಷರಿಗೆ ಸೂಚಿಸಿದರು.
ಚುನಾವಣಾ ಜಾಗೃತಿ ಸಂಘ, ಎಲೆಕ್ಟರೋಲ್ ಲಿಟರಸಿ ಕ್ಲಬ್, ಮತದಾನ ಜಾಗೃತಿ ಫೋರಮ್, ನಾಲೆಡ್ಜ್ ಆಟಿಟ್ಯೂಡ್ ಪಾರ್ಟಿಸಿಪೇಟ್, ಎಎಂಎಫ್, ವಿಹೆಚ್‍ಎ ಮುಂತಾದ ಸ್ವೀಪ್ ಚಟುವಟಿಗಳ ಬಗ್ಗೆ ಅಧಿಕಾರಿಗಳಿಗೆ ಸವಿವರವಾಗಿ ಮಾಹಿತಿ ನೀಡಿದರು.
ಸ್ವೀಪ್ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ,
ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮ, ವಾರ್ತಾಧಿಕಾರಿ ಮಮತ, ಸ್ವೀಪ್ ನೋಡಲ್ ಅಧಿಕಾರಿ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ಇಓಗಳು ಸಭೆಯಲ್ಲಿ ಭಾಗವಹಿಸಿದ್ದರು.