ತುಮಕೂರು
ಜಿಲ್ಲೆಯಲ್ಲಿನ 1-15 ವರ್ಷದ ಮಕ್ಕಳಿಗೆ ಜಪಾನಿಸ್ ಎನ್‍ಸಿಪಾಲಿಟಿಸ್(ಜೆ.ಇ.) ಲಸಿಕೆಯನ್ನು ನೀಡಬೇಕಿದ್ದು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಇ.ಓ., ಟಿಹೆಚ್‍ಓ ಇವರನ್ನೊಳಗೊಂಡ ಟಾಸ್ಕ್‍ಪೋರ್ಸ್ ರಚಿಸಿಕೊಂಡು, ಲಸಿಕಾ ಅಭಿಯಾನ ಪ್ರಾರಂಭಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಐದೂವರೆ ಲಕ್ಷ ಜೆಇ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಇನ್ನು 3 ವಾರದೊಳಗಾಗಿ ಈ ಲಸಿಕಾ ಅಭಿಯಾನ ಪೂರ್ಣಗೊಳಿಸಬೇಕಿದೆ. ಲಸಿಕೆ ಕುರಿತು ಟಾಂಟಾಂ ಮಾಡುವ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಪೋಷಕರಲ್ಲಿ ಲಸಿಕೆ ಕುರಿತು ಸಕಾರಾತ್ಮಕ ಅರಿವು ಮೂಡಿಸಬೇಕು. ಈ ಲಸಿಕೆ ಬಗ್ಗೆ ಎಲ್ಲಿಯೂ ಸಹ ನಕಾರಾತ್ಮಕ ಘಟನೆ ವರದಿಯಾಗಿಲ್ಲ ಎಂದ ಅವರು, ಟಾಸ್ಕ್‍ಪೋರ್ಸ್ ಸಮಿತಿಯು ಸಭೆ ಸೇರಿ, ಮೈಕ್ರೋ ಪ್ಲಾನಿಂಗ್ ಮಾಡಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ವ್ಯಾಕ್ಸಿನ್ ಕಾರ್ಯಕ್ರಮ ಚುರುಕುಗೊಳಿಸಬೇಕು ಎಂದರು.
ಜಿಲ್ಲೆಗೆ ಒದಗಿಸಲಾಗಿರುವ ಕಾರ್ಬಿವ್ಯಾಕ್ಸಿನ್, ಕೋವಿಶೀಲ್ಡ್, ಕೋವ್ಯಾಕ್ಸಿನ್ ಎಕ್ಸ್‍ಪೈರಿ ಆಗುವ ಮೊದಲೇ ಲಸಿಕಾಕರಣ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಇಲ್ಲಿಯವರೆಗೆ 3.83ಲಕ್ಷ ಅಭಾ ಕಾರ್ಡ್ ವಿತರಿಸಲಾಗಿದ್ದು, ಈ ಪ್ರಗತಿ ಆಶಾದಾಯಕವಾಗಿರುವುದಿಲ್ಲ. ಕಳೆದ ವಾರ 25,168 ಕಾರ್ಡ್ ನೋಂದಣಿಯಾಗಿದ್ದು, ಕಡಿಮೆ ಪ್ರಗತಿಯಾಗಿದೆ. ವಿಎ, ಆರ್‍ಐ, ತಹಶೀಲ್ದಾರರುಗಳು ಈ ಕುರಿತು ಗಮನ ಹರಿಸಬೇಕು ಎಂದು ಸೂಚಿಸಿದರು.
ಯುಡಿಐಡಿ, ಅಭಾ ಕಾರ್ಡ್ ನೋಂದಣಿ, ವಿತರಣೆ ಅತ್ಯಂತ ಪ್ರಮುಖ ವಿಷಯವಾಗಿದೆ. ಪ್ರತಿ ದಿನ ಒಂದೂವರೆ ಸಾವಿರ, ಪ್ರತಿ ವಾರ 10ಸಾವಿರ ಕಾರ್ಡುಗಳ ನೋಂದಣಿಯಾಗಬೇಕು ಎಂದು ತಿಳಿಸಿದರು.
ಯುಡಿಐಡಿ ಶೇ.93ರಷ್ಟು ಪ್ರಗತಿಯಾಗಿದ್ದು, ಶೇ.95ರಷ್ಟು ಈ ವಾರ ಆಗಬೇಕು. ಎಎಂಒ, ಟಿಹೆಚ್‍ಒ ಜವಾಬ್ದಾರಿ ತೆಗೆದುಕೊಂಡು ಮಾಡಬೇಕಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು ಮಾತನಾಡಿ, ಬಿಪಿಎಲ್ ಕುಟುಂಬದವರಿಗೆ 5ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ನೀಡುವ ‘ಅಭಾ’ ಯೋಜನೆಯನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಿ, ನೋಂದಣಿ ಮಾಡಿಸಬೇಕಿದೆ. ದೇಶದ ಯಾವುದೇ ಸರ್ಕಾರಿ ಮತ್ತು ನೋಂದಾಯಿತ ಆಸ್ಪತ್ರೆಗಳಲ್ಲಿ ಜನಸಾಮಾನ್ಯರು ಈ ಕಾರ್ಡ್ ಹೊಂದುವ ಮೂಲಕ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಇದೊಂದು ಪುಣ್ಯದ ಕೆಲಸ ಎಂದು ಭಾವಿಸಿ ಅಧಿಕಾರಿಗಳು ಜನರಿಗೆ ಅಭಾ ಕಾರ್ಡ್ ಮಾಡಿಸಬೇಕು ಎಂದು ಕರೆ ನೀಡಿದರು.
ಮಳೆ ಹಾನಿ ಪ್ರಕರಣಗಳನ್ನು ಸಂಬಂಧಿಸಿದ ಪೋರ್ಟಲ್‍ಗಳಲ್ಲಿ ಅಪ್‍ಲೋಡ್ ಮಾಡಲು ಸೋಮವಾರವೇ ಕಡೆಯ ದಿನವಾಗಿದ್ದು, ತಹಶೀಲ್ದಾರರು ಇಂದು ಸಂಜೆಯೊಳಗಾಗಿ ಇದನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಸಿವೇಜ್ ವೇಸ್ಟ್ ಮ್ಯಾನೇಜ್‍ಮೆಂಟ್(ಎಸ್‍ಡಬ್ಲ್ಯುಎಂ) ನಿವೇಶನಕ್ಕೆ ಸಂಬಂಧಿಸಿದಂತೆ ತಕರಾರು ಅಥವಾ ಸಮಸ್ಯೆಯಾದಲ್ಲಿ ಬೇರೆ ಕಡೆ ಜಾಗ ಗುರುತಿಸಿ ನೀಡುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
2021-22ನೇ ಸಾಲಿನ 11ನೇ ಕೃಷಿ ಗಣತಿಯನ್ನು ಮೊಬೈಲ್ ಆಪ್ ಮೂಲಕ ಮಾಡಲಿದ್ದು, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೂ ಸಹ ಈ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು. ಈ ಕೃಷಿ ಗಣತಿಯಿಂದ ಸಾಗುವಳಿ ಹಿಡುವಳಿದಾರರ ಸಂಖ್ಯೆ, ವಿಸ್ತೀರ್ಣ, ಭೂ ಬಳಕೆ, ಬೆಳೆ ವಿಭಾಗ, ಇನ್‍ಪುಟ್ ಬಳಕೆಯ ವಿಧಾನ ಇತ್ಯಾದಿ ಆಧಾರದ ಮೇಲೆ ಪ್ರತಿ ಕ್ಷೇತ್ರದ ರಚನೆ ಮತ್ತು ಗುಣಲಕ್ಷಣಗಳನ್ನು ವಿವರಿಸಬಹುದಾಗಿದೆ. ಹೊಸ ಕೃಷಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಮತ್ತು ಅವುಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಅಗತ್ಯವಿರುವ ತಾಲ್ಲೂಕು/ಗ್ರಾಮ ಮಟ್ಟದ ದತ್ತಾಂಶವನ್ನು ಈ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್, ವಾರ್ತಾಧಿಕಾರಿ ಮಮತ, ತಹಶೀಲ್ದಾರ್ ಮೋಹನ್‍ಕುಮಾರ್, ಡಿಡಿಎಲ್‍ಆರ್ ಸುಜಯ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.