ತುಮಕೂರು
ದೇಶದ ಪ್ರಗತಿಗೆ ಭ್ರಷ್ಟಾಚಾರ ಮಾರಕವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಭ್ರಷ್ಟಾಚಾರ ಎಷ್ಟೇ ಬೇರೂರಿದರೂ ಸಹ ನಾವೆಲ್ಲರೂ ಮನಸ್ಸು ಮಾಡಿದ್ದಲ್ಲಿ ಕಡಿವಾಣ ಹಾಕಬಹುದು ಎಂದು ತುಮಕೂರು ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್ ವಲೀಬಾಷಾ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ‘ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹ’ದ ಅಂಗವಾಗಿ ಅಧಿಕಾರಿ ವರ್ಗದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಅರಿವು ಮೂಡಿಸಲು ಇಂದು ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ, ಜನಸಾಮಾನ್ಯರು ತಮ್ಮ ದಿನನಿತ್ಯದ ಕಷ್ಟ ಕಾರ್ಪಣ್ಯಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ಅವರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡಬೇಕು ಅಥವಾ ತಾಂತ್ರಿಕ ಕಾರಣವಿದ್ದಲ್ಲಿ ಸೂಕ್ತ ಸ್ವೀಕೃತಿಯನ್ನು ನೀಡಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರು ಸಂಬಳ ಪಡೆಯುತ್ತಿರುವುದು, ಸರ್ಕಾರಿ ವಸತಿ, ಸರ್ಕಾರಿ ವಾಹನ ಮುಂತಾದ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿರುವುದು ಜನರ ತೆರಿಗೆ ಹಣದಿಂದ. ಆದುದರಿಂದ ನಾವು ವೃತ್ತಿಬದ್ಧತೆಯನ್ನು ಕಾಪಿಟ್ಟುಕೊಳ್ಳಬೇಕಾಗುತ್ತದೆ ಎಂದರು.
ಸರ್ಕಾರಿ ಕಚೇರಿಗಳ ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ಸಿಬ್ಬಂದಿಗಳ ಮೇಲೆ ಪರಿಣಾಮಕಾರಿಯಾಗಿ ಹಿಡಿತ ಸಾಧಿಸಬೇಕು. ಪ್ರತಿ 15 ಅಥವಾ ತಿಂಗಳಿಗೊಮ್ಮೆ ಕಡತಗಳ ವಿಲೇವಾರಿ ಬಗ್ಗೆ ತಪಾಸಣೆ ನಡೆಸಬೇಕು. ಇದರಿಂದ ಕಡತಗಳ ಚಲನ-ವಲನ ತಂತಾನೆ ಪ್ರಾರಂಭವಾಗುತ್ತದೆ. ನನ್ನ ಕಚೇರಿ, ನನ್ನ ಸಿಬ್ಬಂದಿ, ನನ್ನ ಕಡತ ಎಂಬ ಮನೋಧೋರಣೆ ಅನುಸರಿಸುವ ಮೂಲಕ ಅಧಿಕಾರಿಗಳು ತಮ್ಮ ಕಚೇರಿ-ಸಿಬ್ಬಂದಿ-ಕಡತಗಳನ್ನು ಚೊಕ್ಕಟವಾಗಿಡಬೇಕಾಗುತ್ತದೆ. ಕಡತಗಳನ್ನು ವಿಲೇ ಮಾಡದೆ ಬಾಕಿ ಉಳಿಸಿಕೊಂಡಲ್ಲಿ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ ಎಂದರು.
ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಬದಲಾಗಬೇಕಿದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಬೇಡ. ಸರ್ಕಾರದ ಯೋಜನೆಗಳು ಭ್ರಷ್ಟಾಚಾರದ ಕಾರಣ ಪರಿಣಾಮಕಾರಿಯಾಗಿ ಅನುಷ್ಟಾನವಾಗುತ್ತಿಲ್ಲ. ಕಡತಗಳ ವಿಲೇವಾರಿ ತ್ವರಿತಗತಿಯಲ್ಲಿ ಆಗಬೇಕು. ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಆಗಮಿಸಿ ಕಡತಗಳ ಪರಿಶೀಲನೆ ಮಾಡುವ ಹಾಗೆ ಮಾಡಬೇಡಿ ಎಂದು ಸೂಚಿಸಿದರು.
ಭ್ರಷ್ಟಾಚಾರ ಎಷ್ಟೇ ಬೇರೂರಿದ್ದರೂ ಸಹ ನಾವೆಲ್ಲರೂ ಸೇರಿ ನಿರ್ಮೂಲನೆ ಮಾಡೋಣ ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮಾತನಾಡಿ, ಸರ್ಕಾರಿ ಸೇವೆಗೆ ಸೇರುವ ಮುನ್ನ ಸರ್ಕಾರ ಹಾಗೂ ಸರ್ಕಾರಿ ನೌಕರರಿಂದ ನಾವು ಏನನ್ನೂ ಬಯಸುತ್ತೇವೆಯೋ ಅದೇ ರೀತಿ ಸರ್ಕಾರಿ ಸೇವೆಗೆ ಸೇರಿದ ಮೇಲೂ ಸಹ ನಾವು ಪ್ರಾಮಾಣಿಕತೆಯನ್ನು ಕಾಯ್ದಿಟ್ಟುಕೊಳ್ಳಬೇಕಾಗುತ್ತದೆ. ಕೇವಲ ಹಣ ನೀಡುವುದು ತೆಗೆದುಕೊಳ್ಳುವುದಷ್ಟೇ ಭ್ರಷ್ಟಾಚಾರವಲ್ಲ. ಜಾತಿ ಆಧಾರಿತ ಕೆಲಸಗಳು, ಅಧಿಕಾರ ದುರುಪಯೋಗ ಮುಂತಾದ 65 ಪ್ರಕಾರಗಳು ಭ್ರಷ್ಟಾಚಾರದ ವ್ಯಾಪ್ತಿಗೆ ಒಳಪಡುತ್ತವೆ ಎಂದು ತಿಳಿಸಿದರು.
ನಮ್ಮ ಕಚೇರಿಯನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಬೇಕು, ಕಡತಗಳ ಪರಿಶೀಲನೆ ಮಾಡದಿದ್ದಲ್ಲಿ ನಾವೂ ಸಹ ಭ್ರಷ್ಟಾಚಾರದಲ್ಲಿ ಪಾಲುದಾರರಿದ್ದ ಹಾಗೆ ಎಂದರು.
ಜನಸಾಮಾನ್ಯರಿಗೆ ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿರುವುದೂ ಸಹ ಅತಿ ಮುಖ್ಯವಾಗುತ್ತದೆ. ಜನಸಾಮಾನ್ಯರಿಗೆ ಅಧಿಕಾರಿಗಳು ಕಚೇರಿಯಲ್ಲಿ ಸಿಗದಿದ್ದಲ್ಲಿ, ಆತ ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಅಥವಾ ಜನರಿಂದ ದೂರವಿರಲು ಪ್ರಯತ್ನಿಸುತ್ತಿದ್ದಾನೆ ಎಂಬ ಅರ್ಥ ಬರುತ್ತದೆ ಎಂದರು.