ತುಮಕೂರು
ಭಾರತೀಯ ಸಂಸ್ಕøತಿಯಲ್ಲಿ ಗೋಪೂಜೆಗೆ ವಿಶೇಷ ಸ್ಥಾನಮಾನವಿದ್ದು,ನೂರು ಪುಣ್ಯಕ್ಷೇತ್ರಗಳ ದರ್ಶನದ ಭಾಗ್ಯ ಒಂದು ಗೋಪೂಜೆಯಿಂದ ದೊರೆಯಲಿದೆ.ಇದು ವೀರಶೈವ,ಲಿಂಗಾಯಿತರಿಗಷ್ಟೇ ಒಳ್ಳೆಯದನ್ನು ಮಾಡುವುದಿಲ್ಲ.ಇಡೀ ಮನುಕುಲಕ್ಕೆ ಒಳ್ಳೆಯದನ್ನು ಮಾಡಲಿದೆ ಎಂದು ಶ್ರೀಅಟವಿ ಜಂಗಮ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿಗಳು ತಿಳಿಸಿದ್ದಾರೆ.
ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಜಂಗಮ ಸುಕ್ಷೇತ್ರದಲ್ಲಿ ಶ್ರೀಅಟವಿ ಮಹಾಸ್ವಾಮಿಗಳ 122ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಕೊನೆಯ ದಿನದ ಗೋಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು,ಗೋಪೂಜೆಯ ಫಲ ಶ್ರೀಮಠದ ಭಕ್ತಾಧಿಗಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಇಂದು 108 ಗೋವುಗಳಿಗೆ 1108 ದಂಪತಿಗಳಿಂದ ಗೋಪೂಜೆ ಹಮ್ಮಿಕೊಳ್ಳಲಾಗಿದೆ.ಇದೊಂದು ಪುಣ್ಯದ ಕಾರ್ಯ ಎಂದರು.
ಶ್ರೀಮಠದ ಪರಮ ಭಕ್ತರಾದ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ದಂಪತಿಗಳು ಇಂದು ಬ್ರಾಹ್ಮಿ ಮರ್ಹೂತದಲ್ಲಿ ಗೋಪೂಜೆ ನೆರವೇರಿಸಿದರು. ಶ್ರೀಅಟವಿ ಜಂಗಮ ಸುಕ್ಷೇತ್ರದ ಮುಂದಿನ ಉತ್ತರಾಧಿಕಾರಿಯಾಗಿ ಶ್ರೀಮಲ್ಲಿಕಾರ್ಜುನ ದೇವರ ನ್ನು ಈಗಾಗಲೇ ನಾಡಿನ ಹಲವು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನೇಮಿಸಿದ್ದು,ಅವರು ಮುಂದಿನ ದಿನಗಳಲ್ಲಿ ಮಠವನ್ನು ನಡೆಸಿಕೊಂಡು ಹೋಗಲಿದ್ದಾರೆ.ನಾವುಗಳು ಅವರಿಗೆ ಬೇಕಾದ ಆಧ್ಯಾತ್ಮ ಸಾಧನೆ, ಧ್ಯಾನ,ತಪಸ್ಸಿನ ಮಾರ್ಗಗಳನ್ನು ಕಲಿಸುತ್ತಾ, ಮಠದಲ್ಲಿಯೇ ಉಳಿಯಲು ಬಯಸಿದ್ದೇವೆ ಎಂದು ಶ್ರೀಶಿವಲಿಂಗಸ್ವಾಮೀಜಿ ತಿಳಿಸಿದರು.
ಗೋಸಂರಕ್ಷಣಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೇಖರ್ ಹಾಗೂ ಅಟವಿ ಜಂಗಮ ಸುಕ್ಷೇತ್ರದಲ್ಲಿ ಗೋಶಾಲೆ ನಿರ್ಮಿಸಿಕೊಟ್ಟಿರುವ ಬ್ರಹ್ಮಸಂದ್ರ ಬಸವರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರಸ್ವಾಮೀಜಿ,ಬೆಳ್ಳಾವೆ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ,ಮಠದ ಉತ್ತರಾಧಿಕಾರಿ ಶ್ರೀಮಲ್ಲಿಕಾರ್ಜುನ ದೇವರು,ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್,ಮಹಾನಗರಪಾಲಿಕೆ ಸದಸ್ಯ ಟಿ.ಎಂ.ಮಹೇಶ್,ಶ್ರೀಮತಿ ಶೋಭಾ,ಟ್ರಸ್ಟಿಗಳಾದ ನಂಜುಂಡಪ್ಪ,ಸೀತಕಲ್ಲು ಕೃಷ್ಣಯ್ಯ,ಭೀಮರಾಜು, ಸಿದ್ದವೀರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.