ತುಮಕೂರು
ಮಹಾತ್ಮಗಾಂಧಿ ಕ್ರೀಡಾಂಗಣದ ನಿರ್ಮಾಣ ಪೂರ್ಣಗೊಂಡಿದ್ದರೂ,ಕ್ರೀಡಾಪಟುಗಳ ಅಭ್ಯಾಸಕ್ಕೆ ಮುಕ್ತಗೊಳಿ ಸದೆ, ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ನಿರ್ಲಕ್ಷ ತೋರಿದ್ದು, ಡಿಸೆಂಬರ್ 1ರೊಳಗೆ ಕ್ರೀಡಾಂಗಣದ ಪ್ರವೇಶಕ್ಕೆ ಅವಕಾಶ ಕಲ್ಪಿಸದಿದ್ದರೆ, ಬೀಗ ಹೊಡೆದು, ಅಭ್ಯಾಸ ಆರಂಭಿಸುವುದು ಅನಿವಾರ್ಯ ಎಂದು ಕ್ರೀಡಾಪಟುಗಳು ಹಾಗೂ ಕ್ರೀಡಾಪೋಷಕರು ತಿಳಿಸಿದ್ದಾರೆ.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾಪಟುಗಳಾದ ಅನಿಲ್, ಟಿ.ಕೆ.ಆನಂದ್,ಲಕ್ಷ್ಮಿನಾರಾಯಣ್,ಪ್ರಭಾಕರ್,ಶ್ರೀನಿವಾಸ್,ಧನಿಯಕುಮಾರ್ ಅವರುಗಳು ಈ ಸಂಬಂಧ ನವೆಂಬರ್ 08ರ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಎಲ್ಲಾ ಕ್ರೀಡಾಪಟುಗಳು ಮನವಿ ಸಲ್ಲಿಸಲಿದೇವೆ. ಡಿಸೆಂಬರ್ 01ಕ್ಕೆ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡದಿದ್ದರೆ ನಾವೇ ಬಾಗಿಲು ತೆಗೆದು ಅಭ್ಯಾಸ ಆರಂಭಿಸುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಕಳೆದ 2018ರಲ್ಲಿ ಸ್ಮಾರ್ಟ್‍ಸಿಟಿಯ 66 ಕೋಟಿರೂಗಳ ಅನುದಾನದಲ್ಲಿ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಇದ್ದ ಕ್ರೀಡಾಂಗಣವನ್ನು ನೆಲಸಮ ಮಾಡಿದ್ದರಿಂದ ಅಥ್ಲೇಟಿಕ್,ಬ್ಯಾಸ್ಕೇಟ್‍ಬಾಲ್,ಕಬ್ಬಡಿ,ಹಾಕಿ,ವಾಲಿಬಾಲ್,ಪುಟ್‍ಬಾಲ್, ಟೆಕ್ವಾಂಡೋ,ಶೂಟಿಂಗ್ ಸೇರಿದಂತೆ ಹಲವಾರು ಕ್ರೀಡೆಗಳಿಗೆ ಅಭ್ಯಾಸಕ್ಕೆ ಅವಕಾಶವೇ ಇಲ್ಲದಂತಾಗಿದೆ.ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಯೂ ಹಲವಾರು ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದರಿಂದ ಅಲ್ಲಿಯೂ ಕ್ರೀಡಾ ಚಟುವಟಿಕೆಗಳ ಅಭ್ಯಾಸಕ್ಕ್ಕೆ ಜಾಗವಿಲ್ಲ.ಇದೇ ಸ್ಥಿತಿ ಮುಂದುವರೆದರೆ ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳೇ ಮರೀಚಿಕೆಯಾಗಲಿವೆ ಎಂಬ ಆತಂಕವನ್ನು ಕ್ರೀಡಾಪಟುಗಳು ಹಾಗು ಕ್ರೀಡಾಪೋಷಕರು ವ್ಯಕ್ತ ಪಡಿಸಿದರು.
ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕøತಿಕ ಸಂಸ್ಥೆಯ ಅನಿಲ್ ಮಾತನಾಡಿ, ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಾಣ ಮಾಡಿರುವ ಒಳಾಂಗಣ ಕ್ರೀಡಾಂಗಣ ತುಂಬಾ ಅವೈಜ್ಞಾನಿಕವಾಗಿದೆ.ವಾಲಿಬಾಲ್,ಕಬ್ಬಡಿ ಮತ್ತು ಬ್ಯಾಸ್ಕೇಟ್‍ಬಾಲ್ ಆಟಗಳನ್ನು ಸಿಮೆಂಟ್ ನೆಲದ ಮೇಲೆ ಆಡಲು ಸಾಧ್ಯವೇ ಎಂದು ಪ್ರಶ್ನಿಸಿದರು.ಅಲ್ಲದೆ ಸುಮಾರು 66 ಲಕ್ಷ ರೂಗಳಲ್ಲಿ ಅತ್ಯಂತ ಕಿರಿದಾದ ಜಾಗದಲ್ಲಿ ಕುಸ್ತಿ ಅಂಕಣ ನಿರ್ಮಾಣ ಮಾಡಿದ್ದಾರೆ.ಕನಿಷ್ಠ 10*10 ಮೀಟರ್ ರಿಂಗ್ ನಿರ್ಮಾಣ ಮಾಡಲು ಅಲ್ಲಿ ಜಾಗವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ,ಮಹಾತ್ಮಗಾಂಧಿ ಕ್ರೀಡಾಂಗಣದ ಶೇ90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ.ಅಥ್ಲೇಟಿಕ್‍ಗೆ ಸಂಬಂಧಿಸಿದ ಸಿಂಥೆಟಿಕ್ ಟ್ರಾಕ್ ನಿರ್ಮಾಣವಷ್ಟೇ ಬಾಕಿ ಇದೆ.ಕಳೆದ 8 ತಿಂಗಳಿನಿಂದ ಮಳೆಯ ನೆಪ ಹೇಳಿಕೊಂಡು ಟ್ರಾಕ್ ನಿರ್ಮಿಸುತ್ತಿಲ್ಲ.ಮುಂದಿನ ತಿಂಗಳು ಅಂತರ ವಿವಿ ರಾಷ್ಟ್ರಮಟ್ಟದ ಟೂರ್ನಿಗಳಿವೆ.ಅಲ್ಲದೆ ಮುಂಬರುವ ರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅಭ್ಯಾಸ ಕೈಗೊಳ್ಳಲು ಸ್ಥಳಾವಕಾಶವೇ ಇಲ್ಲದಂತಾಗಿದೆ.ಈ ವಿಚಾರವಾಗಿ ಹಲವಾರು ಬಾರಿ ಶಾಸಕರು,ಸಂಸದರು,ಜಿಲ್ಲಾಧಿಕಾರಿಗಳು,ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅನಿವಾರ್ಯವಾಗಿ ಕ್ರೀಡಾಪಟುಗಳೇ ಸ್ಟೇಡಿಯಂನ ಬೀಗ ಹೊಡೆದು,ಅಭ್ಯಾಸ ಆರಂಭಿಸುವುದು ಅನಿವಾರ್ಯವಾಗಿದೆ ಎಂದರು.
ನೂತನವಾಗಿ ನಿರ್ಮಾಣವಾಗಿರುವ ಕ್ರೀಡಾಂಗಣದ ನಿರ್ವಹಣೆಯ ದೃಷ್ಟಿಯಿಂದ ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆಯುತ್ತಿದೆ.ವಿವಿಧ ಕ್ರೀಡೆಗಳನ್ನಾಡುವ ಕ್ರೀಡಾಪಟುಗಳನ್ನು ಒಳಗೊಂಡ ನಿರ್ವಹಣಾ ಸಮಿತಿ ರಚಿಸದೆ,ಕೇವಲ ಒಂದು ಸಂಸ್ಥೆಯ ಖೋ-ಖೋ ಕ್ರೀಡೆಯನ್ನಾಡುವ ವ್ಯಕ್ತಿಗಳ ಸಮಿತಿ ರಚಿಸಿ,ಇತರೆ ಕ್ರೀಡೆಗಳನ್ನು ಕಡೆಗಣಿಸಲಾಗಿದೆ.ಶಾಸಕರು ಹೇಳಿದಕ್ಕೆಲ್ಲಾ ಹೂಗುಟ್ಟುವ ವ್ಯಕ್ತಿಗಳನ್ನು ಸಮಿತಿಗೆ ಸೇರಿಸಲಾಗಿದೆ ಎಂದು ಕ್ರೀಡಾಪಟುಗಳು ದೂರಿದರು.
ಅಂತರರಾಷ್ಟ್ರೀಯ ಅಥ್ಲೇಟ್ ಕೃಷಿಕ್ ಅವರ ತಂದೆ ಮಂಜುನಾಥ್,ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಿಂಥಟಿಕ್ ಟ್ರಾಕ್ ಇಲ್ಲದ ಕಾರಣ. ನನ್ನ ಮಗನಂತೆ ಅನೇಕ ಅಥ್ಲೇಟಿಕ್ ಆಟಗಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಸರಿಯಾದ ದೈಹಿಕ ಸಾಮಥ್ರ್ಯ ಇರುವ ವೇಳೆ ಅಭ್ಯಾಸ ಮಾಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಆದರೆ ಕಳೆದ ನಾಲ್ಕು ವರ್ಷದಿಂದ ಅಭ್ಯಾಸಕ್ಕೆ ಸರಿಯಾದ ಜಾಗವೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.