ತುಮಕೂರು


ಕರ್ನಾಟಕ ಸಂಗೀತ, ಯಕ್ಷಗಾನ ಹಾಗೂ ಗಮಕ ಕಲೆಗಳ ನಡುವಿನ ಪರಸ್ಪರ ಪ್ರಭಾವ, ಸಾಮ್ಯ ಹಾಗೂ ವ್ಯತ್ಯಾಸಗಳ ಕುರಿತ ವಿಸ್ತøತ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್. ಜಿ. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಯಕ್ಷದೀವಿಗೆ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ನಗರದ ಎಂ.ಜಿ. ರಸ್ತೆಯ ಮಹಿಳಾ ಸಮಾಜ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಯಕ್ಷಗಾನ-ಕರ್ನಾಟಕ ಸಂಗೀತ-ಗಮಕಗಳ ನಡುವಿನ ಸಾಮ್ಯ, ವ್ಯತ್ಯಾಸಗಳ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲ ಕಲೆಗಳೂ ತಮ್ಮಷ್ಟಕ್ಕೇ ಸ್ವತಂತ್ರ ಹಾಗೂ ವೈಶಿಷ್ಟ್ಯಪೂರ್ಣವಾದವು. ಅವುಗಳಿಗೆ ಸ್ವಂತಿಕೆ ಇದೆ. ಆದರೆ ಆ ನಿಯಮಗಳ ನಡುವೆಯೂ ಅವು ಪರಸ್ಪರ ಜತೆಯಾಗಿ ಸಾಗಬಲ್ಲವು. ಇವುಗಳ ಕುರಿತ ಇನ್ನಷ್ಟು ಸಂಶೋಧನೆ ನಡೆಯಬೇಕು ಎಂದರು.
ಸಂಗೀತವು ಆಪ್ಯಾಯಮಾನತೆಗೆ, ದೀನತೆಗೆ ಹಾಗೂ ಆತ್ಮದರ್ಶನಕ್ಕೆ ನಿಮಿತ್ತವಾಗಿದೆ ಎಂಬ ಡಿ.ವಿ.ಜಿ.ಯವರ ಮಾತನ್ನು ಉಲ್ಲೇಖಿಸಿದ ಅವರು ಸಂಗೀತದಂತಹ ಕಲೆಗಳು ಆತ್ಮಸಾಕ್ಷಾತ್ಕಾರಕ್ಕೆ ದಾರಿಯಾಗಬೇಕು ಎಂದರು.
ಗಮಕ ಕಲಾವಿದ ಗ. ಸೀ. ಶ್ರೀನಿವಾಸಮೂರ್ತಿ, ಭಾಗವತ ರಮೇಶ್ ಭಟ್ ಪುತ್ತೂರು, ಮಹಿಳಾ ಸಮಾಜ ಟ್ರಸ್ಟಿನ ಕಾರ್ಯದರ್ಶಿ ಸುಭಾಷಿಣಿ ರವೀಶ್‍ಕುಮಾರ್ ಉಪಸ್ಥಿತರಿದ್ದರು. ಯಕ್ಷದೀವಿಗೆಯ ಕೋಶಾಧಿಕಾರಿ ಸಿಬಂತಿ ಪದ್ಮನಾಭ ಸ್ವಾಗತಿಸಿದರು. ಅಧ್ಯಕ್ಷೆ ಆರತಿ ಪಟ್ರಮೆ ವಂದಿಸಿದರು. ಸುಧನ್ವಾ ದೇರಾಜೆ ನಿರೂಪಿಸಿದರು.
ಕಾರ್ಯಕ್ರಮದ ಮೊದಲನೆಯ ಗೋಷ್ಠಿಯಲ್ಲಿ ಯಕ್ಷಗಾನ, ಕರ್ನಾಟಕ ಸಂಗೀತ ಹಾಗೂ ಗಮಕ ಕಲೆಗಳ ಪರಿಣತ ಕಲಾವಿದರು ಗಾನಪದ್ಧತಿಯ ಆಧಾರದಲ್ಲಿ ಆಯಾ ಕಲೆಗಳ ನಡುವಿನ ಸಾಮ್ಯ ಹಾಗೂ ವ್ಯತ್ಯಾಸಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಎರಡನೆಯ ಪ್ರಾತ್ಯಕ್ಷಿಕೆಯಲ್ಲಿ ವಾಚಿಕ ಹಾಗೂ ರಸಗಳ ಆಧಾರದಲ್ಲಿ ಗಮಕ ಹಾಗೂ ಯಕ್ಷಗಾನಗಳ ಸಾಮ್ಯ ಹಾಗೂ ವ್ಯತ್ಯಾಸ ಗುರುತಿಸಲಾಯಿತು.
ಮೂರನೆಯ ಅವಧಿಯಲ್ಲಿ ಮೂರೂ ಕಲೆಗಳ ಸಮಗ್ರ ಸ್ವರೂಪದ ಪ್ರಾತ್ಯಕ್ಷಿಕೆ ನಡೆಯಿತು. ಕರ್ನಾಟಕ ಸಂಗೀತ ಕಚೇರಿ, ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿಯನ್ನು ಆಧರಿಸಿದ ಕರ್ಣಪರ್ವದ ಗಮಕ ವಾಚನ-ವ್ಯಾಖ್ಯಾನ, ಹಾಗೂ ಗೇರುಸೊಪ್ಪೆ ಶಾಂತಪ್ಪಯ್ಯ ವಿರಚಿತ ‘ಕರ್ಣಪರ್ವ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಯಕ್ಷಗಾನ ವಿಭಾಗದಲ್ಲಿ ಹಿಮ್ಮೇಳ ಕಲಾವಿದರಾಗಿ ರಮೇಶ ಭಟ್ ಪುತ್ತೂರು, ವಿಜಯ ಕುಂಬ್ಳೆ, ಪಿ.ಜಿ. ಜಗನ್ನಿವಾಸರಾವ್ ಪುತ್ತೂರು,
ಅವಿನಾಶ್ ಬೈಪಾಡಿತ್ತಾಯ, ಅಮೋಘ ಕುಂಟಿನಿ, ಮುಮ್ಮೇಳ ಕಲಾವಿದರಾಗಿ ಗಣರಾಜ ಕುಂಬ್ಳೆ, ಅಜಿತ ಕಾರಂತ, ಸುಧನ್ವಾ ದೇರಾಜೆ, ಶಶಾಂಕ ಅರ್ನಾಡಿ, ಸಿಬಂತಿ ಪದ್ಮನಾಭ, ಆರತಿ ಪಟ್ರಮೆ ಭಾಗವಹಿಸಿದರು.
ಗಮಕ ಕಲಾವಿದರಾಗಿ ಗ. ಸೀ. ಶ್ರೀನಿವಾಸಮೂರ್ತಿ, ಲಕ್ಷ್ಮೀ ಜೈಪ್ರಕಾಶ್, ಡಾ. ಸಂಧ್ಯಾ ಎನ್., ಸಾವಿತ್ರಿ ಸತ್ಯೇಂದ್ರ, ಶ್ರೀದೇವಿ ಅನಂತರಾಮು, ಸಂಗೀತ ವಿಭಾಗದ ಹಾಡುಗಾರಿಕೆಯಲ್ಲಿ ಡಾ. ಅಶ್ವಿನಿ ಪಿ. ಆರ್., ಮಹಿಮಾ ಭಟ್ ಸರ್ಪಂಗಳ, ವಯೋಲಿನ್‍ನಲ್ಲಿ ಪಿ.ಎಸ್. ಪ್ರಸನ್ನಕುಮಾರ್, ಮೃದಂಗದಲ್ಲಿ ಶ್ರೀಶ ರವಿಶಂಕರ್ ಸಹಕರಿಸಿದರು.

(Visited 1 times, 1 visits today)