ತುಮಕೂರು
ನಗರದ ಅಗಳಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗಾಗಿ ‘ಸ್ಕಿಲ್ಸ್ ಅಂಡ್ ಸಿಮುಲೇಷನ್’ ಪ್ರಯೋಗಾಲಯ ಆರಂಭಗೊಂಡಿದೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನ ಸಲಕರಣೆಗಳನ್ನು ಒಳಗೊಂಡಿರುವ ಪ್ರಯೋಗಾಲಯವನ್ನು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ, ಸುರಕ್ಷಿತವಾಗಿ ಮತ್ತು ಸಮರ್ಥವಾಗಿ ತರಬೇತಿ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ, ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮಹಾವಿದ್ಯಾಲಯದಲ್ಲಿ ವಿದೇಶಿ ವೈದ್ಯರು ಮತ್ತು ಪ್ರಾಧ್ಯಾಪಕÀರುಗಳು ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ ಎಂದರು.
ವೈದ್ಯಕೀಯ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗಳಲ್ಲಿ, ‘ಸ್ಕಿಲ್ಸ್ ಅಂಡ್ ಸಿಮುಲೇಷನ್’ ಪ್ರಯೋಗಾಲಯದ ಅಳವಡಿಕೆ ಒಂದು ಮಹತ್ತರ ಹೆಜ್ಜೆ. ‘ಸ್ಕಿಲ್ಸ್ ಅಂಡ್ ಸಿಮುಲೇಷನ್’ ಪ್ರಯೋಗಾಲಯದಲ್ಲಿ, ಕ್ರತಕ ಮಾನವ ಮಾದರಿಗಳನ್ನು ಬಳಸಿಕೊಂಡು, ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ. ಇಲ್ಲಿ ರೋಗಿಗಳಿಗೆ ಬದಲಾಗಿ, ಕೃತಕ ಮಾನವ ಮಾದರಿಗಳನ್ನು ಬಳಸಿಕೊಳ್ಳಲಾಗುತ್ತದೆ. ಕಾಲೇಜಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೂ, ಪ್ರಯೋಗಾಲಯದ ಪ್ರಯೋಜನ ದೊರೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ರೆಡಿಯೋ ಥೆರಪಿ ಮುಖ್ಯಸ್ಥರಾದ ಡಾ.ನವೀನ್ ಮಾತನಾಡಿ, ಸಿದ್ಧಾರ್ಥ ಮಹಾವಿದ್ಯಾಲಯವು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ, ಪ್ರತಿಯೊಂದು ಸೌಲಭ್ಯಗಳನ್ನು ಒದಗಿಸಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಪರಿಪೂರ್ಣ ವೈದ್ಯರುಗಳಾಗಿ ಹೊರಮೊಮ್ಮಬೇಕು, ಎಂದರು.
ಕಾರ್ಯಕ್ರಮದಲ್ಲಿ ಸಾಹೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಪಿ. ಬಾಲಚಂದ್ರಶೆಟ್ಟಿ, ರಿಜಿಸ್ಟ್ರಾರ್ ಡಾ.ಎಂ. ಝಡ್ ಕುರಿಯನ್, ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸುಶೀಲ್ ಚಂದ್ರ ಮಹಾಪಾತ್ರ, ದಂತ ವೈದ್ಯಕೀಯ ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಪ್ರವೀಣ ಬಿ ಕುಡ್ವ, ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್, ಡಾ.ಮಂಜುನಾಥ್, ಹಾಗೂ ಸಿಬ್ಬಂದಿ ಹಾಜರಿದ್ದರು.